ತಾಳಿಕೋಟಿ: ಧರ್ಮದ ತಳಹದಿಯ ಮೇಲೆ ಶಿಕ್ಷಣ ಮತ್ತು ಸಂಸ್ಕಾರಗಳನ್ನು ನೀಡುವ ಮೂಲಕ ಮಠಮಾನ್ಯಗಳು ಮಾನವ ಕಲ್ಯಾಣ ಕೇಂದ್ರಗಳಾಗಿ ಅನಾದಿ ಕಾಲದಿಂದಲೂ ಮಾನವರನ್ನು ಉದ್ಧರಿಸುವ ಕಾರ್ಯ ಮಾಡುತ್ತಾ ಬಂದಿದ್ದು, ಈ ದಿಸೆಯಲ್ಲಿ ದಾನ ಧರ್ಮದ ಗುಣಗಳನ್ನು ಪ್ರತಿಯೊಬ್ಬರೂ ಅನುಸರಿಸಿ ನಡೆದಾಗ ಮಾತ್ರ ಉದಾತ್ತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಕೇದಾರ ಪೀಠದ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು. ತಾಳಿಕೋಟಿ ತಾಲೂಕಿನ
ಕಲಕೇರಿ ಗ್ರಾಮದ ಜೆ ಜೆ ಶಿಕ್ಷಣ ಸಂಸ್ಥೆಯ ಆವರಣದ ಮಹಾಮಠದಲ್ಲಿ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಮಹಾ ಸಂಸ್ಥಾನಮಠ ಜಾಲಹಳ್ಳಿ-ಕಲಕೇರಿಯ ಪೀಠಾಧಿಪತಿಗಳಾದ ಶಿವಾಚಾರ್ಯ ರತ್ನ ಜಗದಾರಾಧ್ಯ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರ 70ನೇ ವರ್ಷದ ಹುಟ್ಟುಹಬ್ಬದ ವರ್ಧಂತಿ ಮಹೋತ್ಸವ ಹಾಗೂ ಅಭಿನಂದನಾ ಸಮಾರಂಭ ಸೇರಿದಂತೆ ವಿವಿದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಕ್ತಿವಂತರರು ರಕ್ಷಣೆ ಮಾಡುವುದು, ಸಿರಿವಂತರರು ದಾನ ಮಾಡುವುದು, ಅಧಿಕಾರದಲ್ಲಿದ್ದವರು ಬಡವರ ಸೇವೆ ಮಾಡುವ ಮೂಲಕ ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಬೆಳೆಸಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವಾಗಬೇಕು ಅಂದಾಗ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.
ಭಗವಂತನ ಪ್ರತಿರೂಪದಂತಿರುವ ಗುರುವಿನ ಮಠಗಳು ಬೆಳೆದಾಗ ಸಮಾಜದ ಉದ್ದಾರವಾಗಲು ಸಾಧ್ಯವಾಗುತ್ತದೆ. ಯಾವತ್ತೂ ಮಠಗಳು ಶಿಕ್ಷಣ, ಅನ್ನ, ಅರಿವೆ ಜೊತೆಗೆ ಭವರೋಗದ ನಿವಾರಣಾ ಕೇಂದ್ರಗಳಾಗಿ ಕಾರ್ಯ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಜಾಲಹಳ್ಳಿ ಜಗದಾರಾಧ್ಯ ಜಯಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಈ ಭಾಗದಲ್ಲಿ ಹಲವು ಮಠಗಳನ್ನು ಸ್ಥಾಪಿಸುವ ಮೂಲಕ ಅಸಂಖ್ಯಾತ ಭಕ್ತಬಳಗವನ್ನು ಹೊಂದುವ ಮೂಲಕ ಭಕ್ತರನ್ನು ಉದ್ಧಾರ ಮಾಡುವ ಕಾರ್ಯದಲ್ಲಿ ತೊಡಗಿದ್ದು, ಅಂತಹ ಗುರುಗಳ ಮಠಗಳು ಬೆಳವಣಿಗೆಯಾಗಲು ನಾವೆಲ್ಲ ದಾನ ಧರ್ಮದ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಸಣ್ಣ ಕೈಗಾರಿಕಾ ಸಚಿವರಾದ ಶರಣಬಸಪ್ಪ ದರ್ಶನಾಪುರ ಹೇಳಿದರು.
ಇದೇ ವೇಳೆ ಜಾಲಹಳ್ಳಿ ಶ್ರೀಗಳ ಜೀವನ ಚರಿತ್ರೆ ಕುರಿತಾದ ಚಾಣಕ್ಯ ಪ್ರಕಾಶನದಿಂದ ಹೊರತಂದಿರುವ ಸಾಹಿತಿ ಮನು ಪತ್ತಾರ ಅವರು ಬರೆದಿರುವ ‘ಭಾಗ್ಯವಿದಾತ’ ಜೀವನ ಚರಿತ್ರೆ ಪುಸ್ತಕವನ್ನು ಕೇದಾರ ಜಗದ್ಗುರು ಮಹಾಸನ್ನಿಧಿಯವರು ಮತ್ತು ಸಣ್ಣ ಕೈಗಾರಿಕಾ ಸಚಿವರಾದ ಶರಣಬಸಪ್ಪ ದರ್ಶನಾಪುರ ಬಿಡುಗಡೆಗೊಳಿಸಿದರು. ಇದೇ ವೇಳೆ ಜಾಲಹಳ್ಳಿ ಶ್ರೀಗಳಿಗೆ ಅನೇಕ ಭಕ್ತರು ತುಲಾಭಾರ ಸೇವೆ ಮಾಡುವ ಮೂಲಕ ಧನ್ಯತಾಭಾವ ಮೆರೆದರು. ಹಾಗೂ ಮಣ್ಣೇರಿ ಗ್ರಾಮದಿಂದ ಆಗಮಿಸಿದ ನಂದಿ(ಎತ್ತು)ಯನ್ನು ಹಣ್ಣು ಹಂಪಲು ಮತ್ತು ಕಬ್ಬಿನಿಂದ ತುಲಾಭಾರ ಸೇವೆ ಮಾಡಿದರು. ಈ ವೇಳೆ ತುಲಾಭಾರ ಮಾಡಿಸಿಕೊಂಡ ನಂದಿ ವೇದಿಕೆಯನ್ನೇರಿ ಶ್ರೀಗಳ ಆಶೀರ್ವಾದ ಪಡೆದದ್ದು ಎಲ್ಲರ ಗಮನ ಸೆಳೆಯಿತು.
ಮಾಗಣಗೇರಿಯ ಡಾ.ವಿಶ್ವಾರಾಧ್ಯ ಶಿವಾಚಾರ್ಯರು, ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಆಲಮೇಲದ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಹಿರೂರು ಹಿರೇಮಠದ ಜಯಸಿದ್ದೇಶ್ವರ ಶಿವಾಚಾರ್ಯರು, ಸಿಂದಗಿಯ ವಿಶ್ವಪ್ರಭು ಶಿವಾಚಾರ್ಯರು ಮಾತನಾಡಿದರು.
ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆಯ ಅಧ್ಯಕ್ಷರಾದ ಸಿಂದಗಿ ಸಾರಂಗಮಠದ ಪ್ರಭುಸಾರಂಗದೇವ ಶಿವಾಚಾರ್ಯರು, ಕಲಕೇರಿಯ ಗುರುಮರುಳಾರಾಧ್ಯರ ಹಿರೇಮಠದ ಸಿದ್ದರಾಮ ಶಿವಾಚಾರ್ಯರು, ಪಂಚರಂಗ ಸಂಸ್ಥಾನ ಗದ್ದುಗೇಮಠದ ಶ್ರೀಗುರುಮಡಿವಾಳೇಶ್ವರ ಶಿವಾಚಾರ್ಯರು. ದೇವರಭೂರದ ಅಭಿನವ ಗಜದಂಡ ಶಿವಾಚಾರ್ಯರು, ಹೆಡಗಾಪೂರದ ದಾರುಕಾಲಿಂಗ ಶಿವಾಚಾರ್ಯರು, ಮುತ್ತಗಿಯ ವೀರರುದ್ರಮುನಿ ಶಿವಾಚಾರ್ಯರು, ಮುಖಂಡರಾದ ಬಸನಗೌಡ ಪಾಟೀಲ ಯಡಿಯಾಪೂರ, ಸುರೇಶಗೌಡ ನಾಡಗೌಡ (ಬಿಂಜಲಭಾವಿ), ಸಿದ್ದು ಬುಳ್ಳಾ ಹಾಗೂ ಹಲವಾರು ಗಣ್ಯಮಾನ್ಯರು ಉಪಸ್ಥಿತರಿದ್ದರು.
“ಧರ್ಮದ ತಳಹದಿಯ ಮೇಲೆ ಭಕ್ತರಿಗೆ ಶಿಕ್ಷಣ ಮತ್ತು ಸಂಸ್ಕಾರಗಳನ್ನು ನೀಡುವ ಮೂಲಕ ಮಠಮಾನ್ಯಗಳು ಮಾನವ ಕಲ್ಯಾಣ ಕೇಂದ್ರಗಳಾಗಿ ಕಾರ್ಯನಿರ್ವಹಿಸಿವೆ” ಕೇದಾರ ಜಗದ್ಗುರುಗಳು.

