ರಾಯಚೂರು ಡಿಸೆಂಬರ್ 18 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2025-26ನೇ ಸಾಲಿನಲ್ಲಿ ನಿರುದ್ಯೋಗಿ ಮಹಿಳೆಯರಿಗೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳಲ್ಲಿ ಆರ್ಥಿಕ ನೆರವನ್ನು ನೀಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಉದ್ಯೋಗಿನಿ ಯೋಜನೆಯಡಿ 18-55 ವಯೋಮಿತಿಯೊಳಗಿರುವ ಆರ್ಥಿಕವಾಗಿ ಹಿಂದುಳಿದ ಮತ್ತು ಸಾಮಾನ್ಯ ಮಹಿಳೆಯರು ಯಾವುದಾದರೂ ಲಾಭದಾಯಕ ಚಟುವಟಿಕೆಯಲ್ಲಿ ಸ್ವಂತ ಉದ್ಯೋಗವನ್ನು ಕೈಗೊಳ್ಳಲು ಬ್ಯಾಂಕಿನಿಂದ ಗರಿಷ್ಠ 3 ಲಕ್ಷ ರೂ.ಗಳವರೆಗೆ ಸಾಲ ಹಾಗೂ ಸಾಮಾನ್ಯ ವರ್ಗದ ಮಹಿಳೆಯರಿಗೆ, ವಿಧವೆ, ಅಂಗವಿಕಲರು ಹಾಗೂ ಸಂಕಷ್ಠ ಮಹಿಳೆಯರಿಗೆ ಗರಿಷ್ಠ 90,000ರೂ. ಅಥವಾ ಶೇ.30 ರಷ್ಟುಗಳವರೆಗೆ ಸಹಾಯಧನ ನೀಡಲಾಗುತ್ತದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಹಿಳೆಯರಿಗೆ ಗರಿಷ್ಟ 15,000ರೂ. ಅಥವಾ ಶೇ.50 ರಷ್ಟುಗಳವರೆಗೆ ಸಹಾಯಧನವನ್ನು ನೀಡಲಾಗುವುದು.
ಧನಶ್ರೀ, ಚೇತನ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳಲ್ಲಿ 18-60 ವಯೋಮಿತಿಗೊಳಗಿರುವ ಸಂಸ್ಥೆಯಲ್ಲಿ ನೋಂದಣಿಯಾಗಿರುವ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಯಾವುದಾದರೂ ಲಾಭದಾಯಕ ಚಟುವಟಿಕೆಯಲ್ಲಿ ಸ್ವಂತ ಉದ್ಯೋಗವನ್ನು ಕೈಗೊಳ್ಳಲು ಆಯ್ಕೆ ಸಮಿತಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ನಿಗಮದಿಂದ ನೇರವಾಗಿ 30,000ರೂ. ಸಹಾಯಧನವನ್ನು ಡಿ.ಬಿ.ಟಿ ಮೂಲಕ ಅವರ ಖಾತೆಗೆ ಜಮೆ ಮಾಡಲಾಗುತ್ತದೆ. ಆಸಕ್ತರು ಜನವರಿ 15ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ದಾಖಲೆಗಳು: 2025-26ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸುವುದು (ರೂ.20,000-00 ಗಳಿಗಿಂತ ಮೀರದ ವಾರ್ಷಿಕ ಆದಾಯ ಇರತಕ್ಕದ್ದು), ಸಾಮಾನ್ಯ ಮಹಿಳೆಯರಿಗೆ (ರೂ.150000-00 ಗಳಿಗಿಂತ ಮೀರದ ವಾರ್ಷಿಕ ಆದಾಯ ಇರತಕ್ಕದ್ದು). ಬಿ.ಪಿ.ಎಲ್ ಕಾರ್ಡ್, ವಾಸಸ್ಥಳ ದೃಡೀಕರಣ ಪತ್ರ, ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಶಾಲಾ ವರ್ಗಾವಣೆ ಪ್ರಮಾಣ ಪತ್ರ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಲಗತ್ತಿಸುವುದು. ವಿಧವೆ, ಅಂಗವಿಕಲರು, ಸಂಕಷ್ಠಗೊಳಗಾದ ಮಹಿಳೆಯರು ಪ್ರಮಾಣ ಪತ್ರ ಲಗತ್ತಿಸುವುದು. ಯೋಜನಾ ವರದಿ ಹಾಗೂ ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್ ಪುಸ್ತಕದ ಮುಖಪುಟ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಪ್ರತಿ. ಚೇತನ, ಧನಶ್ರೀ, ಲಿಂಗತ್ವ ಅಲ್ಪಸಂಖ್ಯಾತರ ಯೋಜನೆಯಡಿ ಸಂಬಂಧಿಸಿದ ಸಿ.ಬಿ.ಒ ಕಡೆಯಿಂದ ಪತ್ರ ಎ.ಆರ್.ಟಿ ಪತ್ರ ಸ್ವಯಂ ಘೋಷಣೆ ಸಲ್ಲಿಸುವುದು. ವಿವೇಚನ ಕೋಟಾದಡಿ ಸೌಲಭ್ಯ ಪಡೆಯಲು ಇಚ್ಚಿಸುವ ಅರ್ಜಿದಾರರು ಮಾನ್ಯ ಸಚಿವರು/ ಮಾನ್ಯ ಶಾಸಕರು/ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಇವರ ಶಿಫಾರಸ್ಸು ಪತ್ರದೊಂದಿಗೆ ಅರ್ಜಿಸಲ್ಲಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *