ರಾಯಚೂರು ಡಿಸೆಂಬರ್ 18 (ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ 2025-26ನೇ ಸಾಲಿನಲ್ಲಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನ ಖರೀದಿಸಲು ರಾಯಚೂರು ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ತೊಗರಿ ಮಾರಾಟ ಮಾಡಿ ಸರ್ಕಾರದ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಜಿಲ್ಲೆಯ ರೈತರಲ್ಲಿ ಮನವಿ ಮಾಡಿದ್ದಾರೆ.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ, ರೈತರಿಂದ ತೊಗರಿ ಉತ್ಪನ್ನವನ್ನು ಪ್ರತಿ ಎಕರೆಗೆ 4 ಕ್ವಿಂಟಾಲ್ ಹಾಗೂ ತೊಗರಿ ಬೆಳೆದ ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗುವಂತೆ ಖರೀದಿ ಪ್ರಮಾಣ ನಿಗಧಿಪಡಿಸಿದ್ದು, ಎಫ್.ಎ.ಕ್ಯೂ ಗುಣಮಟ್ಟದ ಪ್ರತಿ ಕ್ವಿಂಟಾಲ್ ಗೆ 8000 ರೂ.ಗಳಂತೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲಾಗುವುದು.
ಆಸಕ್ತ ರೈತರಿಗೆ ದಿನಾಂಕ 17-12-2025 ರಿಂದ ರೈತರ ನೋಂದಣಿ ಕಾಲಾವಧಿಯನ್ನು 80 ದಿನಗಳವರೆಗೆ ನಿಗದಿ ಮಾಡಿದೆ. ರೈತ ಬಾಂಧವರು ಫ್ರೂಟ್ಸ್ ಐ.ಡಿ, ಆಧಾರ್ ಕಾರ್ಡ್, ಪಹಣಿಯೊಂದಿಗೆ ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *