ರಾಯಚೂರು : ಡಿ 16 – ತಾಲ್ಲೂಕಿನ ವೈ.ಟಿ.ಪಿ.ಎಸ್ ಥರ್ಮಲ್ ಪವರ್ ಕಾರ್ಖಾನೆಗೆ ಸಂಬಂಧಪಟ್ಟಂತೆ ನಡೆಯುತ್ತಿರುವ ಅಕ್ರಮ ಕಲ್ಲಿದ್ದಲು ಸಾಗಾಟ ಮತ್ತು ಭಾರೀ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಖಾಸಗಿ ಕಂಪನಿಯ ಇನ್‌ಚಾರ್ಜ್‌ಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ದಲಿತ ಸೇನೆ ಜಿಲ್ಲಾ ಸಮಿತಿ ರಾಯಚೂರು ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಈ ಕುರಿತು ಮಾತನಾಡಿದ ದಲಿತ ಸೇನೆ ಜಿಲ್ಲಾಧ್ಯಕ್ಷ ಮಾರುತಿ ಚಿಕ್ಕಸೂಗೂರು, ವೈಟಿಪಿಎಸ್ ಕಾರ್ಖಾನೆಯೊಳಗೆ ಬರುವ ಕಲ್ಲಿದ್ದಲು ಸಾಗಾಟದಲ್ಲಿ ಗಂಭೀರ ಅಕ್ರಮಗಳು ನಡೆಯುತ್ತಿದ್ದು, ಕಾರ್ಖಾನೆಗೆ ಬಂದ ಕಲ್ಲಿದ್ದಲು ವ್ಯಾಗನ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಖಾಲಿ ಮಾಡದೆ, ಅಲ್ಪ ಪ್ರಮಾಣ ಉಳಿಸಿಕೊಂಡು ಕಾರ್ಖಾನೆಯ ಹೊರಗಡೆ ತಂದು ಯರಮರಸ್ ರೈಲ್ವೇ ನಿಲ್ದಾಣದ ಬಳಿ ಸಂಪೂರ್ಣ ಖಾಲಿ ಮಾಡಿ, ಇಟಂಗಿ ಬಟ್ಟಿಗಳು ಸೇರಿದಂತೆ ಕೆಲವು ಸಣ್ಣ ಕಾರ್ಖಾನೆಗಳು ಹಾಗೂ ಅನಾಮಿಕರಿಗೆ ದಿನನಿತ್ಯ ಲಕ್ಷಾಂತರ ರೂಪಾಯಿಗಳಿಗೆ ಕಲ್ಲಿದ್ದಲು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳನ್ನು ಹೊರಿಸಿದರು. ಇದೊಂದು ಸಂಘಟಿತ ದೊಡ್ಡ ದಂದೆಯಾಗಿದ್ದು, ನೂರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿರುವ ಶಂಕೆಯಿದೆ ಎಂದು ಅವರು ತಿಳಿಸಿದರು.
ಈ ಅಕ್ರಮ ವ್ಯವಹಾರದಲ್ಲಿ ವೈಟಿಪಿಎಸ್‌ನ ಹಿಂದಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಗಂಗಾಧರ (ಹಾಲಿ ಟಿ.ಡಿ., ಬೆಂಗಳೂರು), ಸೆಕ್ಯೂರಿಟಿ ಇನ್‌ಚಾರ್ಜ್ ಎಇಇ ರವೀಶ್ ಹಾಗೂ ಪವರ್‌ಮ್ಯಾಕ್ ಕಂಪನಿ ಇನ್‌ಚಾರ್ಜ್ ಸುರೇಂದ್ರ ಅವರು ಪರಸ್ಪರ ಕೈಜೋಡಿಸಿ ನೇರವಾಗಿ ಪಾಲುದಾರರಾಗಿದ್ದಾರೆ ಎಂಬ ಆರೋಪಗಳು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು, ಪಬ್ಲಿಕ್ ಟಿವಿ ಸೇರಿದಂತೆ ಅನೇಕ ಮಾಧ್ಯಮಗಳಲ್ಲಿ ಈ ಕುರಿತು ಹಲವು ಬಾರಿ ಪ್ರಸಾರವಾಗಿರುವುದನ್ನೂ ಅವರು ಉಲ್ಲೇಖಿಸಿದರು. ಇಂತಹ ಆರೋಪಗಳ ನಡುವೆಯೂ ಗಂಗಾಧರ ಅವರಿಗೆ ಟಿ.ಡಿ. ಹುದ್ದೆಗೆ ಮುಂಬಡ್ತಿ ನೀಡಿರುವುದು ಕಾನೂನುಬಾಹೀರ ಮತ್ತು ಅನುಮಾನಾಸ್ಪದವಾಗಿದೆ ಎಂದು ಮಾರುತಿ ಚಿಕ್ಕಸೂಗೂರು ಹೇಳಿದರು.

ವೈಟಿಪಿಎಸ್ ಮತ್ತು ಆರ್‌ಟಿಪಿಎಸ್ ಥರ್ಮಲ್ ಪವರ್ ಘಟಕಗಳು ರಾಷ್ಟ್ರಮಟ್ಟದಲ್ಲಿ ಐಎಎಸ್ ಅಧಿಕಾರಿಗಳ ಆಡಳಿತ ವ್ಯಾಪ್ತಿಗೆ ಒಳಪಟ್ಟಿದ್ದರೂ, ಜಿಲ್ಲಾಮಟ್ಟದಲ್ಲಿ ಯಾವುದೇ ಅಹಿತಕರ ಘಟನೆಗಳು ಹಾಗೂ ಕುಂದುಕೊರತೆಗಳಿಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ. ಆದ್ದರಿಂದ ಕಲ್ಲಿದ್ದಲು ಸಾಗಾಟ, ಪವರ್‌ಮ್ಯಾಕ್ ಕಂಪನಿಗೆ ಅಕ್ರಮವಾಗಿ ಸಂದಾಯವಾಗಿರುವ ಬೊಗಸ್ ಬಿಲ್ಲುಗಳು ಹಾಗೂ ಕಾರ್ಖಾನೆಯ ನಿರ್ವಹಣೆಯಲ್ಲಿ ನಡೆದಿರುವ ಹಗರಣಗಳ ಕುರಿತು ಸಮಗ್ರ, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಕಾರ್ಖಾನೆಗೆ ಸಂಬಂಧಪಟ್ಟ ಎಂ.ಡಿ. ಅವರೊಂದಿಗೆ ಕೂಲಂಕಷವಾಗಿ ಚರ್ಚಿಸಿ, ಅಕ್ರಮಗಳಲ್ಲಿ ಶಾಮಿಲ್ ಆಗಿರುವ ಅಧಿಕಾರಿಗಳು ಹಾಗೂ ಕಂಪನಿ ಪ್ರತಿನಿಧಿಗಳ ವಿರುದ್ಧ ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ದಂಡ ವಿಧಿಸಬೇಕು ಎಂದು ದಲಿತ ಸೇನೆ ಜಿಲ್ಲಾ ಸಮಿತಿ ರಾಯಚೂರು ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.

ಈ ಸಂದರ್ಭದಲ್ಲಿ ದಲಿತ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ.ಜಾವೀದ್ ಖಾನ್, ಸುರೇಶಬಾಬು, ಬಾಬು, ಬಾವುದ್ದೀನ್ ಸೇರಿದಂತೆ ಇನ್ನಿತರರು ಇದ್ದರು

Leave a Reply

Your email address will not be published. Required fields are marked *