ಮಾನ್ವಿ : ಸಾಮಾಗ್ರಿಗಳ ಖರೀದಿ ಮೊತ್ತವನ್ನು ಪಾವತಿಸದೆ ನಿರ್ಲಕ್ಷ್ಯ ವಹಿಸಿದ್ದ ಹಿನ್ನೆಲೆಯಲ್ಲಿ, ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿದ್ದ ಹಲ್ಮಾರಿ, ಟೇಬಲ್, ಕುರ್ಚಿಗಳು, ಕಂಪ್ಯೂಟರ್, ಪ್ರಿಂಟರ್ ಸಾಮಾಗ್ರಿಗಳನ್ನು ನ್ಯಾಯಾಲಯದ ಆದೇಶದಂತೆ ಜಪ್ತಿ ಮಾಡಿದ ಘಟನೆ ಸೋಮವಾರ ನಡೆಯಿತು.
ತಾಲೂಕಿನ ಉಟಕನೂರು ಗ್ರಾಮ ಪಂಚಾಯಿತಿಗೆ ವಿವಿಧ ರೀತಿಯ ಸಾಮಾಗ್ರಿಗಳನ್ನು ಪೂರೈಸಿದ್ದ ಪೋತ್ನಾಳ ಗ್ರಾಮದ ಬಾಲಾಜಿ ಹಾರ್ಡವೇರ್ ಅಂಗಡಿ ಮಾಲಿಕ ರಾಮಕೃಷ್ಣ ಅವರು, ಪೂರೈಸಿದ ಸಾಮಾಗ್ರಿಗಳ ಖರೀದಿ ಮೊತ್ತವನ್ನು ಗ್ರಾಮ ಪಂಚಾಯಿತಿಯಿಂದ ಪಾವತಿಸದೆ ಇರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆಹೋದಿದ್ದರು. ಈ ಪ್ರಕರಣವನ್ನು ನ್ಯಾಯಾಲಯವು ಸುದೀರ್ಘವಾಗಿ ಪರಿಶೀಲಿಸಿ, ಅಂದಾಜು ರೂ. 5 ಲಕ್ಷ ಮೊತ್ತದ ಬಾಕಿ ವಸೂಲಾತಿಗಾಗಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗೆ ಸೇರಿದ ಸಾಮಾಗ್ರಿಗಳನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿತ್ತು.
ನ್ಯಾಯಾಲಯದ ಆದೇಶದಂತೆ ಕಳೆದ ತಿಂಗಳು ಮೊದಲ ಹಂತದಲ್ಲಿ ಉಟಕನೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿದ್ದ ಕುರ್ಚಿ, ಟೇಬಲ್ ಹಾಗೂ ಗಣಕಯಂತ್ರಗಳು (ಕಂಪ್ಯೂಟರ್‌ಗಳು) ಜಪ್ತಿ ಮಾಡಲಾಗಿತ್ತು. ಆದರೂ ಸಹ ಬಾಕಿ ಮೊತ್ತವು ಸಂಪೂರ್ಣವಾಗದ ಹಿನ್ನೆಲೆಯಲ್ಲಿ, ನ್ಯಾಯಾಲಯದ ಸೂಚನೆಯಂತೆ ಮುಂದುವರೆದ ಜಪ್ತಿ ಕ್ರಮ ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಮಾನ್ವಿ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಇದ್ದ ಹಲ್ಮಾರಿ, ಟೇಬಲ್, ಕುರ್ಚಿಗಳು ಸೇರಿದಂತೆ ಇನ್ನಿತರ ಕಚೇರಿ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಸಾರ್ವಜನಿಕ ವಲಯದಲ್ಲಿ ಈ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ಜಾರಿಗೆ ತಂದಿರುವ ವಿವಿಧ ಗ್ರಾಮೀಣಾಭಿವೃದ್ಧಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಾದ ಸಂದರ್ಭದಲ್ಲಿ, ಇಂತಹ ಘಟನೆಗಳು ಆಡಳಿತ ವ್ಯವಸ್ಥೆಯ ಮೇಲಿನ ಜನರ ನಂಬಿಕೆಗೆ ಧಕ್ಕೆ ತರುತ್ತಿವೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ನ್ಯಾಯಾಲಯದ ಆದೇಶದಂತೆ ಜಪ್ತಿ ಮಾಡಲಾದ ಸಾಮಗ್ರಿಗಳಲ್ಲಿ ಕೈಯೋಸೆರಾ ಕಂಪನಿಯ ಒಂದು ಝೆರಾಕ್ಸ್ ಯಂತ್ರ (ರೂ. 1,50,000), ಒಂದು ವೀಲ್‌ಚೇರ್ (ರೂ. 500), ಆರು ಗಣಕಯಂತ್ರಗಳು (ರೂ. 1,00,000), ಆರು ಟೇಬಲ್‌ಗಳು (ರೂ. 16,000), ನಾಲ್ಕು ಗೋಡ್ರೇಜ್ ಅಲ್ಮಾರಿಗಳು (ರೂ. 15,000) ಹಾಗೂ 25 ಕುರ್ಚಿಗಳು (ಕಪ್ಪು ಮತ್ತು ಕೆಂಪು ಪ್ಲಾಸ್ಟಿಕ್ ಕುರ್ಚಿಗಳು – 7 ಸೇರಿ) (ರೂ. 25,000) ಒಳಗೊಂಡಿವೆ.
ಗ್ರಾಮ ಪಂಚಾಯಿತಿಗಳ ಮೂಲಕ ಬೀದಿ ದೀಪ, ಕುಡಿಯುವ ನೀರು, ಶಾಲೆ ಹಾಗೂ ಅಂಗನವಾಡಿಗಳಿಗೆ ಮೂಲಭೂತ ಸೌಲಭ್ಯ, ಶೌಚಾಲಯ ನಿರ್ಮಾಣ, ಕೆರೆ–ಕಲ್ಯಾಣಿಗಳ ಪುನಶ್ಚೇತನ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅಕ್ರಮಗಳಿಂದ ಇಂತಹ ಕಾನೂನು ಕ್ರಮಗಳು ಅನಿವಾರ್ಯವಾಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ.
ನ್ಯಾಯಾಲಯದ ಆದೇಶದ ಬಳಿಕವೂ ಬಾಕಿ ಮೊತ್ತ ಪಾವತಿಯಾಗದ ಕಾರಣ ತಾಲೂಕು ಪಂಚಾಯಿತಿ ಮಟ್ಟದ ಕಚೇರಿಯ ಸಾಮಾಗ್ರಿಗಳವರೆಗೆ ಜಪ್ತಿ ಕ್ರಮ ವಿಸ್ತರಿಸಿರುವುದು, ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶವಾಗಬೇಕು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

