ಕಿಕ್ಕರ್: ಆಳಂದ ಪಟ್ಟಣಕ್ಕೆ ಸಮರ್ಪಕ ನೀರು ಪೂರೈಸಲು ಆಗ್ರಹ
ವಾರಕ್ಕೆರಡು ದಿನ ನೀರು ಪೂರೈಸುವ ಭರವಸೆ ಮರೆತ ಶಾಸಕ ಬಿ ಆರ್ ಪಾಟೀಲ
ಅಮರ್ಜಾ ಆಣೆಕಟ್ಟಿನಲ್ಲಿ ಸಮರ್ಪಕ ನೀರು ಇದ್ದರೂ ಆಳಂದ ಪಟ್ಟಣಕ್ಕೆ ನೀರು ಪೂರೈಸುವಲ್ಲಿ ತಾಲೂಕು ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಇದರ ಹೊಣೆಯನ್ನು ಶಾಸಕ ಬಿ ಆರ್ ಪಾಟೀಲ ಹೊರಬೇಕು ಎಂದು ಮಾಜಿ ಶಾಸಕ ಸುಭಾಷ ಆರ್ ಗುತ್ತೇದಾರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಸ್ತುತ ಆಳಂದ ಪಟ್ಟಣದಲ್ಲಿ ೧೫ ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಕಷ್ಟವಾಗುತ್ತಿದೆ. ಸಮರ್ಪಕ ನೀರು ಪೂರೈಕೆ ಇಲ್ಲದೇ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ. ಸ್ಥಳೀಯ ಆಡಳಿತ ಕೂಡಲೇ ಎಚ್ಚೆತ್ತುಕೊಂಡು ವ್ಯವಸ್ಥಿತವಾಗಿ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಶಾಸಕ ಬಿ ಆರ್ ಪಾಟೀಲ ವಾರಕ್ಕೆ ಕನಿಷ್ಠ ೨ ಬಾರಿಯಾದರೂ ನೀರು ಪೂರೈಸುವ ವಾಗ್ದಾನ ನೀಡಿದ್ದರು ಆದರೆ ಆ ಮಾತು ಈಗ ಅವರಿಗೆ ನೆನಪಿಸುವ ಅವಶ್ಯಕತೆ ಬಂದಿದೆ ಎಂದು ತಿಳಿಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿಗಳು ಕಚೇರಿಗೆ ಬರುತ್ತಿಲ್ಲ. ಉಳಿದ ಅಧಿಕಾರಿಗಳಿಗೆ ಕರೆ ಮಾಡಿದರೇ ಫೋನ್ ಕರೆ ಸ್ವೀಕರಿಸುತ್ತಿಲ್ಲ. ಪುರಸಭೆ ಆಡಳಿತ ಸಂಪೂರ್ಣ ಹದಗೆಟ್ಟು ಹೋಗಿದೆ. ಸಾರ್ವಜನಿಕರ ಯಾವ ಕೆಲಸವೂ ಆಗುತ್ತಿಲ್ಲ ಇದರಿಂದ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.
ಕುಡಿಯಲು, ಬಳಸಲು ನೀರಿಲ್ಲದೇ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರ ಅರಿವಿಲ್ಲದೇ ಶಾಸಕರು ಜನರ ಗಮನ ಬೇರೆಡೆ ಸೆಳೆಯಲು ಇಲ್ಲದ ಸಲ್ಲದ ವಿಚಾರಗಳನ್ನು ಪ್ರಸ್ತಾಪಿಸಿ ಕಾಲಹರಣ ಮಾಡುತ್ತಿದ್ದಾರೆ. ಕೂಡಲೇ ಜನರ ಆದ್ಯತೆಯ ವಿಷಯಗಳ ಮೇಲೆ ಗಮನಹರಿಸಿ ನೀರು ಪೂರೈಕೆಗೆ ತ್ವರಿತ ಕ್ರಮಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *