ರಾಯಚೂರು ಡಿಸೆಂಬರ್ 12 (ಕರ್ನಾಟಕ ವಾರ್ತೆ): ಇಲ್ಲಿನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ ಹಾಗೂ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಸಿರವಾರ ತಾಲೂಕಿನ ನವಲಕಲ್ ಶ್ರೀ ಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ಮತ್ತು ಕಾಯ್ದೆಗಳ ಕುರಿತು ಜಾಗೃತಿ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಈ ವೇಳೆ ಮಿಷನ್ ಶಕ್ತಿ ಯೋಜನೆಯ ಜಿಲ್ಲಾ ಸಂಯೋಜಕರಾದ ಬಾವಸಲಿ ಅವರು ಮಾತನಾಡಿ, ಲೈಂಗಿಕ ಹಿಂಸೆಯಿಂದ ಮಹಿಳೆಯರನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಹೆಣ್ಣು-ಗಂಡು ಎಂಬ ಭೇದ-ಭಾವ ದೂರುವಾಗಬೇಕು. ಗಂಡು ಹೆಣ್ಣು ಇಬ್ಬರು ಸಮಾನರು ಎನ್ನುವ ಭಾವನೆಯು ಪ್ರತಿಯೊಬ್ಬರಲ್ಲೂ ಬರಬೇಕು. ಸಾಮಾಜಿಕ ಪಿಡುಗುಗಳಾದ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ದೇವದಾಸಿ ಪದ್ಧತಿ ಇವೆಲ್ಲ ದೂರುವಾಗಬೇಕೆಂದರು.
ಬಾಲ್ಯ ವಿವಾಹ ವಿರುದ್ಧ ಕಠಿಣ ಕಾನೂನು ಇದೆ. ‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಎನ್ನುವ ವಿಧಾನ ಅನುಸರಿಸಿದಲ್ಲಿ ನಮ್ಮ ಜೀವನವು ಉತ್ತಮವಾಗಿ ರೂಪುಗೊಳ್ಳಲು ಸಾಧ್ಯವಿದೆ. ನಿರಂತರ ಪ್ರಯತ್ನವೆ ಯಶಸ್ಸಿನ ಗುಟ್ಟು ಆಗಿದೆ. ನೊಂದ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ 181 ಮಹಿಳಾ ಸಹಾಯವಾಣಿ, 1098 ಮಕ್ಕಳ ಸಹಾಯವಾಣಿ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀ ಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರಾದ ಲಿಂಗರಾಜ, ಶಿಶು
ಅಭಿವೃದ್ಧಿ ಯೋಜನಾಧಿಕಾರಿಗಳ ಹಿರಿಯ ಮೇಲ್ವಿಚಾರಕರಾದ ನಾಗಮ್ಮ. ಹೆಚ್ ಸೇರಿದಂತೆ ವಸತಿ ಶಾಲೆಯ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

