ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ವತಿಯಿಂದ ಬೆಳಗಾವಿಯಲ್ಲಿ ಪತ್ರಿಕಾ ಗೋಷ್ಠಿ ಹಮ್ಮಿಕೊಳ್ಳಲಾಯಿತು. ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸೈಬರ್ ವಂಚನೆಗಳು ಮತ್ತು ಡಿಜಿಟಲ್ ಅಪರಾಧಗಳ ಕುರಿತು ಗಂಭೀರ ಆತಂಕವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.

ಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಡಾ. ನಸೀಮ್ ಅಹ್ಮದ್ ಅವರು ಸರ್ಕಾರದ ಅಧಿಕೃತ ಅಂಕಿಅಂಶಗಳನ್ನು ಉಲ್ಲೇಖಿಸಿ, ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ನಾಗರಿಕರು ಐದು ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ಹಣವನ್ನು ಸೈಬರ್ ವಂಚನೆಗಳ ಮೂಲಕ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು. “ಇದರ ರಿಕವರಿ ಪ್ರಮಾಣ ಕೇವಲ 10% ಮಾತ್ರವಾಗಿರುವುದು ಅತ್ಯಂತ ಆತಂಕಕಾರಿ,” ಎಂದು ಅವರು ಹೇಳಿದರು.

ಅವರು ರಾಜ್ಯ ಸರ್ಕಾರಕ್ಕೆ ಕೆಳಗಿನ ಮುಖ್ಯ ಬೇಡಿಕೆಗಳನ್ನು ಮಂಡಿಸಿದರು:

1. ಬೆಳಗಾವಿ ಅಧಿವೇಶನದಲ್ಲಿ ಸೈಬರ್ ವಂಚನೆ ವಿಷಯವನ್ನು ಪ್ರಮುಖ ಚರ್ಚಾ ಅಂಶವನ್ನಾಗಿ ಮಾಡಿ, ಕಠಿಣ, ಸ್ಪಷ್ಟ ಹಾಗೂ ಪರಿಣಾಮಕಾರಿ ನೀತಿಗಳನ್ನು ತಕ್ಷಣ ರೂಪಿಸಬೇಕು.
2. ವಂಚನೆಗೆ ಒಳಗಾದ ನಾಗರಿಕರ ನಷ್ಟವನ್ನು ಮರಳಿ ಪಡೆಯುವಂತೆ ರಾಜ್ಯ ಸರ್ಕಾರವು State Guarantee Mechanism ಅನ್ನು ರಚಿಸಬೇಕು.
3. ರಾಜ್ಯ ಮಟ್ಟದಲ್ಲಿ ಸ್ವತಂತ್ರವಾಗಿ ಹಾಗೂ 24×7 ಕಾರ್ಯನಿರ್ವಹಿಸುವ ‘ಸೈಬರ್ ಸಹಾಯವಾಣಿ’ ಸ್ಥಾಪಿಸಬೇಕು.
4. ಯುವಕರು ಹಾಗೂ ಸಾರ್ವಜನಿಕರಿಗಾಗಿ ಸೈಬರ್ ಸುರಕ್ಷತೆ, ಹ್ಯಾಕಿಂಗ್ ತಡೆ ಮತ್ತು ಡಿಜಿಟಲ್ ಜಾಗೃತಿ ಕುರಿತು ವ್ಯಾಪಕ ಅಭಿಯಾನಗಳನ್ನು ಜಾರಿಗೆ ತರಬೇಕು.

ನಂತರ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯಿಲ್ ತೀರ್ಥಹಳ್ಳಿ ಅವರು ಸರ್ಕಾರದ ಧೋರಣೆಗಳ ಮೇಲೆ ತೀವ್ರ ಟೀಕೆ ನಡೆಸಿದರು.
“ಅಧಿವೇಶನಗಳು ಜನರ ಹಣದಿಂದ ನಡೆಯುತ್ತವೆ. ಆದ್ದರಿಂದ ಜನಪ್ರತಿನಿಧಿಗಳು ರಾಜಕೀಯ ಕಚ್ಚಾಟಗಳನ್ನು ಬಿಟ್ಟು ಜನರ ನಿಜವಾದ ಸಮಸ್ಯೆಗಳ ಕಡೆ ಗಮನ ಹರಿಸಬೇಕು. ಜನರು ಬೆವರಿಳಿಸಿ ಸಂಪಾದಿಸಿದ ಹಣವನ್ನು ರಕ್ಷಿಸುವುದು ರಾಜ್ಯದ ಜವಾಬ್ದಾರಿಯಾಗಿದೆ. ನಮ್ಮ ಧ್ವನಿ ಸುವರ್ಣಸೌಧದವರೆಗೆ ತಲುಪಬೇಕು,” ಎಂದು ಅವರು ಒತ್ತಿ ಹೇಳಿದರು.

ನಗರಾಧ್ಯಕ್ಷ ಮಸೂದ್ ಅಹ್ಮದ್ ಮಾತನಾಡಿ, ಸೈಬರ್ ವಂಚನೆ ವಿರುದ್ಧ ರಾಜ್ಯಾದ್ಯಂತ ನಡೆದ ಅಭಿಯಾನದ ಭಾಗವಾಗಿ, ಸಾರ್ವಜನಿಕ ಸಭೆಗಳು, ಸ್ತಬ್ಧಚಿತ್ರ ಪ್ರದರ್ಶನಗಳು, ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮಗಳು, ಯುವ ಸಮಾವೇಶಗಳು,ಸೈಬರ್ ಅಪರಾಧ ವಿಭಾಗದ ಸಹಭಾಗಿತ್ವದಲ್ಲಿ ಕಾರ್ಯಾಗಾರ ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಜನಪ್ರತಿನಿಧಿಗಳಿಗೆ ಮನವಿ ಪತ್ರಗಳ ಮೂಲಕ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ತಿಳಿಸಲಾಯಿತು ಎಂದರು ಈ ಸಂದರ್ಭದಲ್ಲಿ ಬೆಳಗಾವಿ ನಗರ ಘಟಕದ ಕಾರ್ಯದರ್ಶಿ ಏಜಾಝ್ ಸಯೀದ್ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *