ರಾಯಚೂರು ಡಿಸೆಂಬರ್ 11 (ಕರ್ನಾಟಕ ವಾರ್ತೆ): ನಗರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ ಅವರು ಡಿ.11 ರಂದು ದಿಢೀರ್ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು.
ಆಸ್ಪತ್ರೆಯ ನಾನಾ ವಾರ್ಡ್ಗಳಿಗೆ ಸಂಚರಿಸಿ ಭಾಣಂತಿಯರ ಮತ್ತು ಶಿಶುಗಳ ಯೋಗಕ್ಷೇಮ ವಿಚಾರಿಸಿದರು. ಸರಿಯಾದ ರೀತಿಯಲ್ಲಿ ಊಟ ಕೊಡುತ್ತಾರಾ? ಚಿಕಿತ್ಸೆ ಮತ್ತು ಔಷಧಿ ಸರಿಯಾಗಿ ನೀಡುತ್ತಾರಾ? ಎಂದು ಕೇಳಿ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯಲ್ಲಿ ನಮಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿದೆ ಎಂದು ಭಾಣಂತಿಯರು ಪ್ರತಿಕ್ರಿಯಿಸಿದರು.
ರಾತ್ರಿ ವೇಳೆಯಲ್ಲೂ ಚಿಕಿತ್ಸೆ ನೀಡಿ: ಜಿಲ್ಲೆಯ ಯಾವುದೇ ಗ್ರಾಮದಿಂದ ರಾತ್ರಿ ವೇಳೆಯಲ್ಲಿ ತುರ್ತು ಚಿಕಿತ್ಸೆ ಕೋರಿ ಬರುವ ಬಾಣಂತಿಯರಿಗೆ ವೈದ್ಯರು ಮತ್ತು ಆಸ್ಪತ್ರೆಯಲ್ಲಿನ ಸಿಬ್ಬಂದಿ ತಕ್ಷಣವೇ ಸ್ಪಂದನೆ ನೀಡಬೇಕು. ಯಾವುದೇ ನೆಪ ಹೇಳದೇ ಬೇರೆಡೆ ಕಳುಹಿಸಬಾರದು. ಪ್ರಥಮ ಹಂತದ ಚಿಕಿತ್ಸೆಗೆ ಕ್ರಮವಹಿಸಿ, ಹೆಚ್ಚಿನ ಚಿಕಿತ್ಸೆಯ ಅವಶ್ಯವಿದ್ದರೆ ಮಾತ್ರ ಬೇರೆಡೆ ಕಳುಹಿಸಲು ಕ್ರಮವಹಿಸಬೇಕು ಎಂದು ಸಿಇಓ ಅವರು ಇದೆ ವೇಳೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಅಕ್ಕ ಕೆಫೆ ಕಾಮಗಾರಿ ಪರಿಶೀಲನೆ: ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಅಕ್ಕ ಕೆಫೆ ಕಾಮಗಾರಿಯನ್ನು ಸಿಇಓ ಅವರು ವೀಕ್ಷಣೆ ಮಾಡಿ, ಗುಣಮಟ್ಟದ ಕಾಮಗಾರಿ ನಡೆಸಲು ಸೂಚನೆ ನೀಡಿದರು. ನೂತನ ಪೌಷ್ಟಿಕ ಪುನಶ್ಚೇತನ ಕೇಂದ್ರ ಸ್ಥಾಪನೆಗೆ ಸಿದ್ದತೆ ಮಾಡಿಕೊಳ್ಳಲು ಇದೆ ವೇಳೆ ಸಿಇಓ ಅವರು ತಿಳಿಸಿದರು. ಮಕ್ಕಳ ಆರೈಕೆಗೆ ಹಾಗೂ ಎಸ್‌ಎನ್‌ಸಿಯು ಘಟಕ್ಕೆ ಬೇಕಾಗುವ ಪರಿಕರಗಳ ಖರೀದಿಗೆ ಬೇಡಿಕೆ ಪತ್ರವನ್ನು ಕೂಡಲೇ ಸಲ್ಲಿಸುವಂತೆ ಸೂಚಿಸಿ, ತಾಯಿ ಮಕ್ಕಳ ಆರೈಕೆಯ ಸೇವೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಬಸವರಾಜ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ನಂದಿತಾ, ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರಜ್ವಲ್ ಸೇರಿದಂತೆ ಇನ್ನೀತರ ವೈದ್ಯರು ಮತ್ತು ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *