ತಾಳಿಕೋಟಿ: ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ವಚನ ಶಿಲಾ ಮಂಟಪದ ಪೀಠಾಧಿಪತಿಗಳಾದ ಪರಮ ಪೂಜ್ಯ ಚನ್ನಬಸವ ಮಹಾಸ್ವಾಮಿಗಳ ನಿಧನಕ್ಕೆ ತಾಳಿಕೋಟಿ ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಗುರುವಾರ ಇಂಗಳೇಶ್ವರದ ವಚನ ಶಿಲಾ ಮಂಟಪಕ್ಕೆ ಭೇಟಿ ನೀಡಿದ ಅವರು ಪೂಜ್ಯ ಮಠಾಧೀಶರೊಂದಿಗೆ ಸೇರಿ ಲಿಂಗೈಕ್ಯ ಚನ್ನಬಸವ ಶ್ರೀಗಳ ಪಾರ್ಥಿವ ಶರೀರಕ್ಕೆ ಪುಷ್ಪಾರ್ಪಣೆ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು ಕಳೆದ 30 ವರ್ಷಗಳಿಂದ ನಮ್ಮೊಂದಿಗೆ ಸ್ನೇಹಪರ ಸಂಬಂಧವನ್ನು ಹೊಂದಿದ್ದ ಶ್ರೀಗಳು ಮತ್ತು ನಾನು ಸಾಕಷ್ಟು ಕಾರ್ಯಕ್ರಮಗಳಲ್ಲಿ ವೇದಿಕೆಯನ್ನು ಹಂಚಿಕೊಂಡಿದ್ದೇವೆ ಅವರೊಬ್ಬ ಅಪ್ಪಟ ಬಸವ ಅನುಯಾಯಿ, ತಮ್ಮ ಮಠದಲ್ಲಿ ಸಾವಿರಾರು ವಚನಗಳನ್ನು ಗೋಡೆಗಳಲ್ಲಿ ಬರೆಯಿಸಿ ನಿರಂತರ ಪ್ರಚಾರವನ್ನು ಮಾಡಿದವರು. ಅತ್ಯಂತ ಸರಳ ವ್ಯಕ್ತಿತ್ವದ ನೇರ ನಿಷ್ಠುರ ನುಡಿಗಳಿಗೆ ಹೆಸರುವಾಸಿ ಗಳಾಗಿದ್ದರು. ಅವರ ಅಗಲುವಿಕೆ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಿಳಿಸಿದರು. ಈ ಸಮಯದಲ್ಲಿ ಮುಸ್ಲಿಂ ಸಮಾಜದ ಗಣ್ಯರಾದ ಅಬ್ದುಲ್ ರೆಹಮಾನ ಎಕೀನ, ಮೆಹಬೂಬ ಚೋರಗಸ್ತಿ, ಮುರ್ತುಜಾಸಾಬ ಮೇತ್ರಿ(ಇಂಜನೀಯರ),ನಜೀರ ಚೋರಗಸ್ತಿ ಇದ್ದರು.

