ಸಿಂಧನೂರು : ಯುವ ಸಮೂಹವು ದುಶ್ಚಟಗಳಿಗೆ ಬಲಿಯಾಗದೆ ಜ್ಞಾನದ ಮಾರ್ಗದ ಕಡೆಗೆ ಮುನ್ನಡೆದರೆ ಬದುಕು ಹಸನಾಗಲಿದೆ ಎಂದು ಡಿವೈಎಸ್ಪಿ ಜಿ.ಚಂದ್ರಶೇಖರ ಹೇಳಿದರು. ನಗರದ ವಿ.ಸಿ.ಬಿ ಪದವಿ ಪೂರ್ವ ಹಾಗು ನ್ಯಾಷನಲ್ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಪೊಲೀಸ್, ಪೊಲೀಸ್ ಉಪಾಧೀಕ್ಷಕರ ಕಚೇರಿ ಸಿಂಧನೂರು ಇವರ ಸಹಯೋಗದಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಬುಧವಾರ ನಡೆದ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಸಾಧ್ಯವೇ? ವಿಷಯದ ಕುರಿತು ಚರ್ಚಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾದಕ ವ್ಯಸನವ ಯುವಜನತೆಗೆ ಮಾರಕವಾಗಿದೆ. ಜ್ಞಾನಿಗಳಾಗುವುದು ಮತ್ತು ದುಶ್ಚಟದಿಂದ ದೂರವಿರುವುದು ಮಾತ್ರ ವ್ಯಕ್ತಿಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಸಾಧ್ಯವೇ? ವಿಷಯವಾಗಿ ಪರ ಹಾಗು ವಿರೋಧದ ಕುರಿತಾಗಿ ಗಂಟೆಗೂ ಅಧಿಕ ಕಾಲ ನಡೆದ ಚರ್ಚೆಯನ್ನು ಡಿವೈಎಸ್ಪಿ ಜಿ.ಚಂದ್ರಶೇಖರ ಹಾಗು ಸಿಪಿಐ ವೀರಾರೆಡ್ಡಿ ವೀಕ್ಷಿಸಿದರು. ಡಿ.12 ರಂದು ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ಪುಟ್ಟಮಾದಯ್ಯ ಅವರಿಂದ ನಗದು ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ನಗರ ಪೊಲೀಸ ಠಾಣೆ ಸಿಪಿಐ ವೀರಾರೆಡ್ಡಿ ಮಾತನಾಡಿ, ಸೈಬರ್ ಅಪರಾಧ, ಅಕ್ರಮ ಚಟುವಟಿಕೆಗಳ ಕುರಿತಂತೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಮೊಬೈಲ್ ಬಳಕೆ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು. ನಿಯಮಬಾಹಿರ ಚಟುವಟಿಕೆಗಳು ಕಂಡುಬಂದರೆ ಪೊಲೀಸ ಇಲಾಖೆ ಗಮನಕ್ಕೆ ತರಬೇಕು ಎಂದರು. ಪಾಟೀಲ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಆರ್.ಸಿ.ಪಾಟೀಲ್ ಮಾತನಾಡಿ, ದುಶ್ಚಟದಿಂದ ದೂರವಿರದಿದ್ದರೆ, ನಿಧಾನವಾಗಿ ಚಟಗಳೇ ಜೀವಕ್ಕೆ ಆಪತ್ತು ತರಲಿವೆ. ವಿದ್ಯಾರ್ಥಿ ಯುವಜನತೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದರು.
ವೇದಿಕೆ ಮೇಲೆ ವಿ.ಸಿ.ಬಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಶೋಕ ಬೆನ್ನೂರು, ಉಪಾಧ್ಯಕ್ಷ ಚಂದ್ರಶೇಖರ ಬೆನ್ನೂರು, ಪ್ರಾಚಾರ್ಯರಾದ ರಾಮಲಿಂಗಯ್ಯ ಹೆಚ್., ನಾಗರಾಜ ಪತ್ತಾರ, ವಿಜಯಕುಮಾರ ನಾಡಗೌಡ ಇದ್ದರು.

