ಸಿಂಧನೂರು : ವಿಶ್ವ ಸಂಸ್ಥೆ ಕರೆಯ ಮೇರೆಗೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸೆ ನಿಮೂರ್ಲನೆಗೆ ಒತ್ತಾಯಿಸಿ ಸಿಂಧನೂರು ತಾಲೂಕು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷೆ ಶಕುಂತಲಾ ಪಾಟೀಲ್ ತಿಳಿಸಿದರು.

ವಿಶ್ವಸಂಸ್ಥೆಯು ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸೆ ನಿರ್ಮೂಲನೆಗೆ ಕರೆ ನೀಡಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ಏಕಾರ ಸ್ವರೂಪದೊಂದಿಗೆ ನಡೆಯುತ್ತಿರುವ ಅತ್ಯಾಚಾರ, ಕೊಲೆ, ಲೈಂಗಿಕ ಕಿರುಕುಳ, ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ, ಬಾಲ್ಯ ವಿವಾಹ, ಕೆಲಸದ ಸ್ಥಳಗಳಲ್ಲಿ ನಡೆಯುವ ಕಿರುಕುಳ, ಹೆಣ್ಣು ಭ್ರೂಣ ಹತ್ಯೆ, ಕೂಲೆ ತಾರತಮ್ಮ, ಲಿಂಗ ತಾರತಮ್ಮ, ಜಾತಿ, ಧರ್ಮ, ಜನಾಂಗೀಯ ಹೆಸರಿನಲ್ಲಿ ದಬ್ಬಾಳಿಕೆಗಳು, ಶಿಕ್ಷಣ ಮತ್ತು ಉದ್ಯೋಗ ನಿರಾಕರಣೆ ಮುಂತಾದ ಸಾಮಾಜಿಕ ಹಾಗೂ ಸಾಂಸ್ಕೃತಿಕ ದಬ್ಬಾಳಿಕೆಗಳನ್ನು ಪ್ರತಿರೋಧಿಸುತ್ತ ಹಲವು ಕಾರ್ಯಕ್ರಮಗಳನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ರಾಜ್ಯ ವ್ಯಾಪಿಯಾಗಿ ನಡೆಸುತ್ತಾ ಬಂದಿದೆ. ಹಿಂಸೆ ನಿರ್ಮೂಲನೆಗಾಗಿ ಇಡೀ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಇಂದು ಮಹಿಳಾ ಹಕ್ಕುಗಳು ಹಾಗೂ ಮಾನವ ಹಕ್ಕುಗಳು ಎಂಬ ಘೋಷಣೆಯೊಂದಿಗೆ ಜನವಾದಿ ಮಹಿಳಾ ಸಂಘಟನೆ ಹೋರಾಟ ನಡೆಸುತ್ತಿದೆ ಎಂದರು.

ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಮೋದಿ ಸರ್ಕಾರ ಹತ್ತು ವರ್ಷಗಳ ಹಿಂದೆ ಹೇಳಿದ ಬೇಟಿ ಬಚಾವೋ, ಬೇಟಿ ಪಡಾವೋ” ಎಂಬ ಘೋಷಣೆಯು ಬರಿ ಘೋಷಣೆಯಾಗಿ ಉಳಿದಿದೆ. ಇಂದು ದೇಶದ ಮಹಿಳೆಯರು ಸುರಕ್ಷತೆ ಬದಲು ಅಸುರಕ್ಷಿತೆಯಿಂದ ಬದುಕು ನಡೆಸುವಂತಾಗಿದೆ. ಭಾರತದಲ್ಲಿ ತಲ ತಲಾಂತರಗಳಿಂದ ಹೆಣ್ಣನ್ನು ಭೋಗದ ವಸ್ತುವಾಗಿಯೇ ಕಾಣಲಾಗುತ್ತಿದೆ. ಹೆಣ್ಣು ದೈಹಿಕ, ಲೈಂಗಿಕ ಹಿಂಸೆಗೆ ತುತ್ತಾಗುತ್ತಿದ್ದಾಳೆ.

ಬಂಡವಾಳ ಶಾಹಿ, ಭೂಮಾಲೀಕ, ಪಾಳೆಗಾರಿ, ಪಿತೃ ಪ್ರಧಾನ ಸಮಾಜ ವ್ಯವಸ್ಥೆಯೇ ಇದಕ್ಕೆಲ್ಲ ಕಾರಣವಾಗಿದೆ. ದೇಶದ ಗಮನ ಸೆಳೆದಿರುವ ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ವೇದವಲ್ಲಿ, ಪದ್ಮಲತಾ, ಆನೆ ಮಾವುತ ನಾರಾಯಣ, ಯಮುನಾ, ಸೌಜನ್ಯ ಸೇರಿದಂತೆ ಇನ್ನೂ ಹಲವರ ಅಸಹಜ ಸಾವು, ಕೊಲೆಗಳು ಹಾಗೂ ಭೂಕಬಳಿಕೆ, ಸ್ವ-ಸಹಾಯ ಸಂಘಗಳಿಂದ ವಿಪರೀತ ಬಡ್ಡಿ ವಸೂಲಿ ಸೇರಿದಂತೆ ಎಲ್ಲವನ್ನು ಎಸ್‌.ಐ.ಟಿ ತನಿಖೆಗೆ ವಹಿಸಬೇಕೆಂದು ಜನವಾದಿ ಮಹಿಳಾ ಸಂಘಟನೆ ಆಗ್ರಹಿಸುತ್ತಿವೆ ಆದರೆ ಎಸ್.ಐ.ಟಿ ರಚಿಸುವುದಕ್ಕೆ ತಮ್ಮದೇ ಸರ್ಕಾರದ ವಿರುದ್ಧವೇ ಉಪಮುಖ್ಯಮಂತ್ರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಹಾಗೂ ಗೃಹ ಸಚಿವರು ಆಡುತ್ತಿರುವ ಮಾತುಗಳು ಅತ್ಯಂತ ಖಂಡನೀಯವಾಗಿವೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾರೆಯಾಗಿ ಜನಸಾಮಾನ್ಯರ ಬದುಕಿಗೆ ಕೊಳ್ಳಿಯಿಟ್ಟು ಚೆಲ್ಲಾಟವಾಡುತ್ತಿರುವುದನ್ನು ಖಂಡಿಸಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕರ್ನಾಟಕ ರಾಜ್ಯ ಸಮಿತಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ಮಾಡುವ ಮೂಲಕ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದು ತಾಲೂಕು ಅಧ್ಯಕ್ಷರಾದ ಗಿರೀಜಾ ಕಿಲ್ಲೇದ್ ಹೇಳಿದರು.

ಈ ಸಂದರ್ಭದಲ್ಲಿ: ತಾಲೂಕಾ ಸಮಿತಿ ಸದಸ್ಯರಾದ ಸವಿತಾ ಕಲ್ಲೂರು, ಜನತಾ ಕಾಲೋನಿ ಘಟಕದ ಮುಖಂಡರಾದ ಬಾನು, ಗೌಸಿಯಾ, ಮಾಲನಬೀ, ಪರ್ವಿನ್ ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *