ಕವಿತಾಳ: ಭೀಮ್ ಆರ್ಮಿ ದಲಿತ, ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಹೈದರಾಬಾದ್ ರಸ್ತೆಯಲ್ಲಿರುವ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಇತ್ತೀಚೆಗೆ ದಿನಾಂಕ : 27-09-2025 ರಂದು ಎಲ್.ಬಿ.ಎಸ್ ನಗರದ ಚಂದ್ರಬಂಡಾ ರಸ್ತೆಯ ಬಳಿ ಇರುವ ಬಿ. ತಿಮ್ಮಾರೆಡ್ಡಿ ಮನೆಯ ಕಾಂಪೌಂಡ್ ಹತ್ತಿರ ತನ್ನ ಗೆಳೆಯರೊಂದಿಗೆ ನಿಂತಿದ್ದ ರಾಯಚೂರು ನಗರದ ಹರಿಜನ ವಾಡದ ಮಾದಿಗ ಸಮುದಾಯಕ್ಕೆ ಸೇರಿದ ದಶವಂತ್ ಅಲಿಯಾಸ್ ತಾಯಪ್ಪ ಎಂಬ ದಲಿತ ಯುವಕನನ್ನು ಬಿ. ತಿಮ್ಮಾರೆಡ್ಡಿ ಮತ್ತು ಆತನ ಸಹಚರರು ವಿನಾ ಕಾರಣ ಜಾತಿ ನಿಂದನೆ ಮಾಡಿ ಗುಂಪು ಹಲ್ಲೆಯ ಮೂಲಕ ದೈಹಿಕ ಹಲ್ಲೆ ನಡೆಸಿ ಮನಸೋ ಇಚ್ಚೆ ಹೊಡೆದಿರುತ್ತಾರೆ. ಇದರ ಪರಿಣಾಮವಾಗಿ ಹಲ್ಲೆಗೊಳಗಾದ ಯುವಕ ಸಾವನ್ನಪ್ಪಿರುತ್ತಾರೆ. ಈ ಕುರಿತು ನಗರದ ಮಾರ್ಕೆಟ್ ಯಾರ್ಡ್ ಪೋಲಿಸ್ ಠಾಣೆಯಲ್ಲಿ ದಿನಾಂಕ : 06-10-2025 ರಂದು ಬಿ. ತಿಮ್ಮಾರೆಡ್ಡಿ ಸೇರಿದಂತೆ ಇತರೆ ಐದು ಜನರ ವಿರುದ್ದ ವಿವಿಧ ಕಲಂಗಳಡಿಯಲ್ಲಿ ಜಾತಿ ನಿಂದನೆ ಮತ್ತು ಕೊಲೆ ಪ್ರಕರಣ ದಾಖಲಾಗಿರುತ್ತದೆ. ಜಾಮೀನು ರಹಿತವಾದ ಗಂಭೀರ ಸ್ವರೂಪದ ಪ್ರಕರಣ ದಾಖಲಾಗಿ ಎರಡು ತಿಂಗಳು ಕಳೆದರೂ ಇಲ್ಲಿಯವರೆಗೂ ಒಬ್ಬೆ ಒಬ್ಬ ಆರೋಪಿಗಳನ್ನು ಬಂಧನ ಮಾಡಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಕ್ಕಾಗಿ ಆಗ್ರಹಿಸಿ ಸುದ್ದಿ ಗೋಷ್ಠಿ ಮಾಡಿದ ಸಂಘಟನೆಯ ಮುಖಂಡರಿಗೂ ಈ ಕೊಲೆ ಪ್ರಕರಣದ ಪ್ರಮುಖ, ಮೊದಲ ಆರೋಪಿ ಬೆದರಿಕೆಯನ್ನು ಹಾಕಿದ್ದರು. ಈ ಪ್ರಕರಣದ ಆರೋಪಿಗಳು ರೂಢಿಗತವಾದ ಆರೋಪಿಗಳಾಗಿರುತ್ತಾರೆ. ಇವರ ವಿರುದ್ಧ ಮಾರ್ಕೆಟ್ ಯಾರ್ಡ್ ಪೋಲಿಸ್ ಠಾಣೆಯಲ್ಲಿ ನಾಲ್ಕೈದು ಪ್ರಕರಣಗಳು ಮತ್ತು ಕೆಲವರ ಮೇಲೆ ಗುಂಡಾ ಪಟ್ಟಿಯನ್ನು ತೆರೆಯಲಾಗಿದೆ. ಈ ಆರೋಪಿಗಳು ವಿಶೇಷ ಮತ್ತು ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯು ಕೂಡ ತಿರಸ್ಕೃತಗೊಂಡಿದೆ. ಪ್ರಕರಣ ದಾಖಲಾಗಿ ಎರಡು ತಿಂಗಳು ಕಳೆದರೂ, ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡು 15 ದಿನಗಳು ಗತಿಸಿದರೂ ಇಲ್ಲಿಯವರೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಪೋಲಿಸರು ಸಂಪೂರ್ಣವಾಗಿ ವಿಫಲರಾಗಿ ಕುಂಟು ನೆಪಗಳನ್ನು ಹೇಳುತ್ತಾ ಬೇಜವಬ್ದಾರಿತನವನ್ನು ಪ್ರದರ್ಶನ ಮಾಡಿದ್ದಾರೆ. ಎಫ್‌ಐಆರ್ ದಾಖಲಿಸಲು ಸಾಕಷ್ಟು ಹಿಂದೇಟು ಹಾಕಿದ ಮತ್ತು ಸಮಯ ತೆಗೆದುಕೊಂಡು ಪೋಲಿಸರು ಈಗ ಆರೋಪಿಗಳನ್ನು ಬಂಧಿಸಲು ನಿರ್ಲಕ್ಷ್ಯ ತೋರುತ್ತಿರುವುದನ್ನು ಗಮನಿಸಿದರೆ ಪ್ರಭಾವ ಮತ್ತು ಒತ್ತಡಕ್ಕೆ ಮಣಿದಿರುವುದು ಎದ್ದು ಕಾಣುತ್ತದೆ. ಇಂತಹ ಗಂಭೀರ ಸ್ವರೂಪದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾದ ಕೂಡಲೇ ಆರೋಪಗಳನ್ನು ಬಂಧಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂಬ ಕಠಿಣ ಕಾನೂನು ಮತ್ತು ಸಂವಿಧಾನಿಕ ನಿಯಮಗಳಿದ್ದರು ಅವುಗಳನ್ನು ಪೋಲಿಸರು ಉಲಂಘನೆ ಮಾಡುತ್ತಿರುವುದು ಕಾನೂನು, ಸಂವಿಧಾನ ಮತ್ತು ನ್ಯಾಯಾಂಗಕ್ಕೆ ಹಾಗೂ ತಮ್ಮ ಕರ್ತವ್ಯಕ್ಕೆ ಎಸೆಗುತ್ತಿರುವ ದ್ರೋಹವಾಗಿದೆ. ಆದ್ದರಿಂದ ಕೂಡಲೇ ಈ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಬೇಕು ಮತ್ತು ಕೊಲೆಯಾದ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ಆಗತ್ಯ ನೆರವು ನೀಡಬೇಕು ನಿರ್ಲಕ್ಷ್ಯ ವಹಿಸಿದರೆ ಬೃಹತ್ ಪ್ರತಿಭಟನೆಯ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿ ಬರೆದ ಮನವಿಯನ್ನು ವರಿಷ್ಠಾಧಿಕಾರಿಗಳ ಮೂಲಕ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಯವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಕೀಲರಾದ ಶಿವಕುಮಾರ ಮ್ಯಾಗಳಮನಿ, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್, ಎಸಿಪಿ ರಾಜ್ಯಾಧ್ಯಕ್ಷ ಎಲ್.ವಿ. ಸುರೇಶ್, ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಎಸ್. ನರಸಿಂಹಲು, ಮುಖಂಡರಾದ ಹನುಮೇಶ್ ಆರೋಲಿ, ರಂಜಿತ್ ದಂಡೋರಾ, ದೂಳ್ಳಯ್ಯ ಗುಂಜಳ್ಳಿ, ಹನುಮೇಶ್ ಭೇರಿ, ಶಾಂತಕುಮಾರ್, ಜಯರಾಜ್ ಭಂಡಾರಿ, ಪ್ರಸಾದ್, ಅನೀಲ ಕುಮಾರ್, ನೀಲಕಂಠ, ರಾಜು, ಸುರೇಶ್, ಚಿದಾನಂದ, ಅಲಿ ಸೇರಿದಂತೆ ಅನೇಕರಿದ್ದರು.

