ಕಂಪ್ಲಿ: “ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ (LLC) ಡಿಸೆಂಬರ್ 15ರವರೆಗೆ ನೀರು ಹರಿಸದಿದ್ದರೆ ಈ ಭಾಗದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಬೆಳೆ ಸಂಪೂರ್ಣ ನಾಶವಾಗಲಿದ್ದು, ರೈತ ಕುಟುಂಬಗಳು ಬೀದಿಗೆ ಬೀಳಲಿವೆ. ಬೆಳೆ ಉಳಿಸಿಕೊಳ್ಳಲು ನ.14ರಿಂದ ‘ರೈತರ ನಡೆ ತುಂಗಭದ್ರಾ ಡ್ಯಾಂ ಕಡೆ’ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ,” ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಜಲಾಶಯದಲ್ಲಿ ಹೊಸ ಗೇಟ್ ಅಳವಡಿಸುವ ಕಾರಣದಿಂದ ಕಳೆದ ಬಾರಿ ನೀರಿದ್ದರೂ ನಾವು ಬೇಸಿಗೆ ಬೆಳೆಯನ್ನು ಸಂಪೂರ್ಣ ಕಳೆದುಕೊಂಡಿದ್ದೆವು. ಈ ಬಾರಿ ಹೆಚ್ಚಿನ ಖರ್ಚು ಮಾಡಿ ಭತ್ತ, ಜೋಳ ಬೆಳೆದಿದ್ದು, ಬೆಳೆಗಳು ಈಗಷ್ಟೇ ಕಾಳು ಕಟ್ಟುವ ಮತ್ತು ತೆನೆ ಬಿಡುವ ಹಂತದಲ್ಲಿವೆ. ಆದರೆ ಸರ್ಕಾರ ನ.20ರವರೆಗೆ ಮಾತ್ರ ನೀರು ಹರಿಸುವುದಾಗಿ ಹೇಳಿರುವುದು ರೈತರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟದ ರೂಪುರೇಷೆ ಮತ್ತು ಬೇಡಿಕೆಗಳು:
“ನ.14ರ ಬೆಳಿಗ್ಗೆ ಕಂಪ್ಲಿಯ ಉದ್ಭವ ಗಣಪತಿ ದೇವಸ್ಥಾನದಿಂದ ಪಾದಯಾತ್ರೆ ಆರಂಭವಾಗಲಿದ್ದು, ನ.16ರ ಸೋಮವಾರ ಮುನಿರಾಬಾದ್‌ನಲ್ಲಿರುವ ನೀರಾವರಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಸರ್ಕಾರ ತಕ್ಷಣವೇ ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿ ಅವರ ಕೋಟಾದಿಂದ ನೀರು ಪಡೆಯಬೇಕು. ಜೊತೆಗೆ ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ಪಡೆದು ಡಿ.15ರವರೆಗೆ LLC ಕಾಲುವೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು,” ಎಂದು ಬಿ.ವಿ. ಗೌಡ ಎಚ್ಚರಿಸಿದ್ದಾರೆ.
ಜಿಲ್ಲಾ ಕಾರ್ಯಧ್ಯಕ್ಷ ಕೆ. ರಮೇಶ, ತಾಲೂಕು ಅಧ್ಯಕ್ಷ ವಿ. ವೀರೇಶ್, ನಗರ ಘಟಕ ಖಜಾಂಚಿ ಟಿ. ಗಂಗಣ್ಣ, ಮುಖಂಡರಾದ ವಿ ಟಿ ರಾಜು, ಬಿ. ಎಂ. ರುದ್ರಯ್ಯ, ಸೇರಿದಂತೆ ಇತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

Leave a Reply

Your email address will not be published. Required fields are marked *