ರಾಯಚೂರು:
ನಗರದ ಐ.ಡಿ.ಎಸ್.ಎಂ.ಟಿ. ಬಡಾವಣೆಯ ಐಬಿ ರಸ್ತೆಯಲ್ಲಿ ಸ್ಥಾಪಿಸಲಾಗಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗೆ ಮಹತ್ವದ ಕೊಡುಗೆ ನೀಡಿದ ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ಅವರ ಮೂರ್ತಿ ಒಂದೂವರೆ ವರ್ಷ ಕಳೆದರೂ ಅನಾವರಣಗೊಳ್ಳದೆ ಅನಾಥ ಸ್ಥಿತಿಯಲ್ಲಿ ಉಳಿದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಮಾಜಿ ಎಪಿಎಂಸಿ ಉಪಾಧ್ಯಕ್ಷರು ಹಾಗೂ ಬಿಜೆಪಿ ಮುಖಂಡರಾದ ಡಾ. ಬಾಬುರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಧುನಿಕ ಕರ್ನಾಟಕದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ ದೇವರಾಜ ಅರಸು ಅವರು ಭೂ ಸುಧಾರಣೆ, ಸಾಮಾಜಿಕ ನ್ಯಾಯ ಹಾಗೂ ಹಿಂದುಳಿದ ವರ್ಗಗಳ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಐತಿಹಾಸಿಕ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ನಾಯಕನ ಮೂರ್ತಿಯನ್ನು ಸ್ಥಾಪಿಸಿ ಒಂದೂವರೆ ವರ್ಷ ಕಳೆದರೂ ಉದ್ಘಾಟನೆ ಮಾಡದೆ ನಿರ್ಲಕ್ಷಿಸಿರುವುದು ಅವರ ಆದರ್ಶಗಳಿಗೆ ಹಾಗೂ ಅವರ ಕೊಡುಗೆಗಳಿಗೆ ತೋರುತ್ತಿರುವ ಅಗೌರವವಾಗಿದೆ ಎಂದು ಅವರು ಖಂಡಿಸಿದ್ದಾರೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ತಕ್ಷಣ ಗಮನಹರಿಸಬೇಕು. ಮೂರ್ತಿ ಅನಾವರಣಕ್ಕೆ ಅಗತ್ಯ ಕ್ರಮ ಕೈಗೊಂಡು ಅಧಿಕೃತವಾಗಿ ಉದ್ಘಾಟನೆಗೊಳಿಸಬೇಕು. ಮಹಾನ್ ನಾಯಕರ ಪ್ರತಿಮೆಯನ್ನು ಸ್ಥಾಪಿಸಿ ವರ್ಷಗಳ ಕಾಲ ಅನಾವರಣಗೊಳಿಸದೆ ಇಡುವುದರಿಂದ ಸಾರ್ವಜನಿಕರಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ದೇವರಾಜ ಅರಸು ಅವರ ಅಭಿಮಾನಿಗಳು, ಹಿಂದುಳಿದ ವರ್ಗಗಳ ಸಂಘಟನೆಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಡಾ. ಬಾಬುರಾವ್ ಎಚ್ಚರಿಕೆ ನೀಡಿದ್ದಾರೆ.
