ರಾಯಚೂರು ನವೆಂಬರ್ 09 (ಕರ್ನಾಟಕ ವಾರ್ತೆ): ಗಾಂಜಾ ಮತ್ತು ತಂಬಾಕು ಪದಾರ್ಥಗಳ ಸೇವನೆಯಿಂದ ದೂರವಿರುವುದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ರಕ್ಷಿಸಲು ಅತ್ಯಂತ ಮಹತ್ವದ ನಿರ್ಧಾರವಾಗಿದೆ. ಇವುಗಳ ಬಳಕೆಯು ಕೇವಲ ವೈಯಕ್ತಿಕ ಆರೋಗ್ಯವನ್ನಷ್ಟೇ ಅಲ್ಲದೆ, ಇಡೀ ಕುಟುಂಬದ ನೆಮ್ಮದಿಯನ್ನು ಹಾಳುಗೆಡವುತ್ತದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹೊಪಾತ್ರ ಅವರು ಹೇಳಿದರು.
ಇತ್ತೀಚೆಗೆ ನಗರದ ನಗರದ ಶೆಟ್ಟಿ ಬಾವಿ ಚೌಕ್ದಿಂದ ಹರಿಜನವಾಡದ ನಾಗರಕಟ್ಟೆ ದೇವಸ್ಥಾನದವರೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ ನಶಾ ಮುಕ್ತ ರಾಯಚೂರು ಹಾಗೂ ತಂಬಾಕು ಮುಕ್ತ ಯುವ ಅಭಿಯಾನ 4.0ರ ಜಾಗೃತಿ ನಡಿಗೆ ಹಾಗೂ ಜಾಗೃತಿ ನಾಟಕಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.
ದೇಹದ ಸದೃಡತೆ, ದೈಹಿಕ ಕ್ಷಮತೆಗೆ, ಬುದ್ದಿಮಟ್ಟದ ಬೆಳವಣಿಗೆ ಅಥವಾ ಕುಟುಂಬದ ಏಳ್ಗೆಗೆ ಏನನ್ನು ಸಹಾಯ ಮಾಡದ, ಮತ್ತು ಬರಿಸುವ, ಅಮಲು ತರಿಸುವ ವ್ಯಕ್ತಿತ್ವ, ಕುಟುಂಬವನ್ನೆ ನಾಶ ಮಾಡುವ ನಶಾ ಪದಾರ್ಥಗಳನ್ನು ನಾವೆಲ್ಲರೂ ಸೇರಿ ಸಮುದಾಯದಿಂದ ದೂರ ಮಾಡಬಾಕಿದೆ ಎಂದರು.
ಒಮ್ಮೆ ಹವ್ಯಾಸವಾಗಿ ಬಳಸಲು ಆರಂಭವಾದ ನಂತರ ಚಟವಾಗಿ ಬದಲಾಗುವ ನಶಾ ಪದಾರ್ಥಗಳಾದ, ಗಾಂಜಾ, ಅಫೀಮು, ಚರಸ್, ಹೆರಾಯೀನ್ ಹಾಗೂ ತಂಬಾಕು ಹಾಗೂ ಅದರ ಉತ್ಪನ್ನಗಳಾದ ಸಿಗರೇಟ್, ಬೀಡಿ, ಹುಕ್ಕಾ ಹಾಗೂ ಮಧ್ಯಪಾನದಂತಹ ಅದರಲ್ಲೂ ಜಿಲ್ಲೆಯ ಕೆಲವು ಸ್ಥಳಗಲ್ಲಿ ಸಿಹೆಚಗ ಪೌಡರ್ನಿಂದ ತಯಾರಿಸಿದ ನಕಲಿ ಸೆಂಧೀ ಯಂತಹ ವಸ್ತುಗಳು ವ್ಯಕ್ತಿಯ ವ್ಯಕ್ತಿತ್ವವನ್ನು ನಾಶ ಮಾಡುವ ಜೊತೆಗೆ ಕುಟುಂಬದ ಗೌರವವನ್ನು ಸಹ ಕುಂದಿಸುತ್ತವೆ ಎಂದರು.
ದೇಶಾದ್ಯಂತ 2020ರ ಆಗಷ್ಟ 15ರಂದು ಜಾಗೃತಿ ಅಭಿಯಾನವನ್ನು ಆರಂಭಿಸಿದ್ದು, ರಾಯಚೂರು ಜಿಲ್ಲೆಯ ಜನತೆಗೆ ನಶಾ ಪದಾರ್ಥಗಳ ಸೇವನೆಯಿಂದಾಗುವ ಹಾನಿ, ದುಷ್ಪರಿಣಾಮಗಳ ಕುರಿತು ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ನಗರ, ಗ್ರಾಮಗಳಲ್ಲಿ ಕಾಲೇಜು ವಿಧ್ಯಾರ್ಥಿಗಳಿಗೆ, ಸ್ಲಂ ಪ್ರದೇಶಗಳಲ್ಲಿ ಜಾಗೃತಿ ನೀಡಲಾಗುತ್ತಿದ್ದು, ನಶಾ ಪದಾರ್ಥಗಳ ಸೇವನೆ ಮಾಡಿದಾಗ ಹಲ್ಲೆ ಮಾಡುವ, ಮನೆಯ ಕೌಟುಂಬದ ಸದಸ್ಯರಿಂದ ನಿರ್ಲಕ್ಷ್ಯಕ್ಕೆ ಒಳಗಾಗುವ, ಆರ್ಥಿಕ ಸಂಕಷ್ಟದ ಸಮಸ್ಯೆಗಳಿಗೆ ಈಡಾಗುವುದನ್ನು ಮನವರಿಕೆ ಮಾಡಲು, ಅದರಲ್ಲೂ ಈ ಕುರಿತು ಯುವಕರಿಗೆ ಹೆಚ್ಚಿನ ಜಾಗೃತಿ ನೀಡೊಣವೆಂದರು.
ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಂದಿತಾ ಎಮ್.ಎನ್. ಅವರು ಮಾತನಾಡಿ, ನಶಾ ಪದಾರ್ಥಗಳನ್ನು ಸೇವಿಸುವ ವ್ಯಕ್ತಿಯು ಗಂಭೀರ ಆರೋಗ್ಯ ಸಮಸ್ಯೆಗಳಾದ ಕ್ಯಾನ್ಸರ್ (ವಿಶೇಷವಾಗಿ ಶ್ವಾಸಕೋಶ ಮತ್ತು ಬಾಯಿ ಕ್ಯಾನ್ಸರ್), ಲಿವರ್ ಸಿರೋಸಿಸ್, ಹೃದಯಾಘಾತ, ಪಾರ್ಶ್ವವಾಯು, ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳಾದ ಖಿನ್ನತೆ, ಮಾನಸಿಕ ಅಸ್ವಸ್ಥತೆ, ಆತ್ಮಹತ್ಯೆಯಂತ ಪ್ರಯತ್ನಗಳಿಗೆ ಒಳಗಾಗುವುದು ಕಾಣುತ್ತಿದ್ದೇವೆ. ಅಲ್ಲದೆ ತಂಬಾಕು ಮುಕ್ತ ಯುವ ಅಭಿಯಾನ 4.0ಅಡಿಯಲ್ಲಿ ಜಿಲ್ಲೆಯಾದ್ಯಂತ 2026ರ ಡಿಸೆಂಬರ್ ತಿಂಗಳವರೆಗೆ ತಂಬಾಕು ಸೇವೆಯಿಂದಾಗುವ ದುಷ್ಪರಿಣಾಮಗಳನ್ನು ತಡೆಯಲು ಕೋಟ್ಪಾ ಕಾಯ್ದೆ 2003ರ ಪರಿಣಾಮಕಾರಿ ಅನುಷ್ಟಾನದ ಜಾಗೃತಿ ಕಾರ್ಯ ನಡೆಯುವುದು ಎಂದರು.
ಡಿ-ಅಡಿಕ್ಷನ್ ಕೇಂದ್ರ: ಈಗಾಗಲೇ ರಾಯಚೂರಿನಲ್ಲಿ ವ್ಯಸನದಿಂದ ಮುಕ್ತಿ ಪಡೆಯಲು ರಿಮ್ಸ್ ಆಸ್ಪತ್ರೆಯ ಬಿ-ಬ್ಲಾಕ್ ರೂಮ್ ನಂಬರ್-27ರಲ್ಲಿ ಕೌನ್ಸಿಲಿಂಗ್ ಸಹಾಯ ಪಡೆಯುಲು ವ್ಯವಸ್ಥೆ ಮಾಡಲಾಗಿದೆ. ಹಾಗೂ ಉಚಿತ ಮಾನಸಿಕ ಆರೋಗ್ಯ ಸಹಾಯವಾಣಿ 14416 ಸದುಪಯೋಗ ಪಡೆಯಬಹುದಾಗಿದೆ ಎಂದರು.
ಜಾಗೃತಿ ನಾಟಕ: ನಶಾ ಪದಾರ್ಥಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಹರಿಜನವಾಡಾದಲ್ಲಿ ವೈದ್ಯಾಧಿಕಾರಿ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಜನತೆಗೆ ಮನ ಮುಟ್ಟುವಂತೆ ಕಿರು ನಾಟಕ ಪ್ರದರ್ಶಿಸಿ, ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಇದೇ ಆರೋಗ್ಯ ಕಾರ್ಯಕ್ರಮಗಳ ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಿಎಸ್ಓ ಡಾ.ಗಣೇಶ್ ಕೆ, ಆರ್ಸಿಹೆಚ್ಓ ಡಾ.ಶಾಕೀರ್ ಮೋಯುನುದ್ದೀನ್, ಡಿಎಫ್ಡಬ್ಲ್ಯುಓ ಡಾ.ಶಿವಕುಮಾರ್ ನಾರಾ, ಡಿಟಿಓ ಡಾ.ಯಶೋಧಾ, ಡಿಎಲ್ಓ ಡಾ.ಅಮೃತ್ ಹುಕ್ಕೇರಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ಲಕ್ಷ್ಮಿಕಾಂತ, ಮನೋರೋಗ ತಜ್ಞ ಡಾ.ಮನೋಹರ ಪತ್ತಾರ, ಪಾಲಿಕೆ ಪರಿಸರ ಅಭಿಯಂತರ ಜಯಪಾಲರೆಡ್ಡಿ, ವೈದ್ಯಾಧಿಕಾರಿಗಳಾದ ಡಾ.ಸುನೀಲ್, ಡಾ.ಗುಂಡಮ್ಮ, ಡಾ.ಶ್ವೇತಾಂಬರಿ, ಡಾ.ಸುನೀತಾ ಸೇರಿದಂತೆ ಮಹಾನಗರ ಪಾಲಿಕೆ, ಪೋಲಿಸ್, ಆರೋಗ್ಯ ಇಲಾಖೆಯ ಸಿಬ್ಬಂದಿಯವರು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಇದ್ದರು.
