ಸಿಂಧನೂರು ನ.೮
ಸ್ವತಂತ್ರ ಬಂದು 79 ವರ್ಷ ಕಳೆದರೂ ಅಸ್ಪೃಶ್ಯತೆ, ಅಸಮಾನತೆ, ಇನ್ನೂ ಜೀವಂತವಾಗಿದೆ. ಅ.18ರಂದು ತಿಡಿಗೋಳ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಯುವಕರು ಗ್ರಾಮದ ಮೇಲ್ಜಾತಿಯವರೊಂದಿಗೆ ಶ್ರೀ ಆಂಜನೇಯ ಜಾತ್ರೆ ಮೆರವಣಿಗೆಯಲ್ಲಿ ಸರಿಸಮವಾಗಿ ಭಾಗವಹಿಸಿದ ಕಾರಣಕ್ಕೆ 400ಕ್ಕೂ ಹೆಚ್ಚು ಮೇಲ್ಜಾತಿಯ ಯುವಕರು 100ಕ್ಕೂ ಹೆಚ್ಚು ದಲಿತರ ಮೇಲೆ ಮಾರಕಾಸ್ತ್ರಗಳಿಂದ ಅಮಾನುಷ ದಾಳಿ ನಡೆಸಿದ್ದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಎನ್.ಮೂರ್ತಿ ಖಂಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಚ್ಚು, ದೊಣ್ಣೆ, ಬಡಿಗಿ, ಕಬ್ಬಿಣದ ರಾಡುಗಳಿಂದ ನೂರಾರು ಮಹಿಳೆಯರು, ವೃದ್ದರು, ಮತ್ತು ಮಕ್ಕಳನ್ನು ಬಿಡದೆ ಬೆನ್ನಟ್ಟಿ ಓಡಾಡಿಸಿ ಹೆಣ್ಣುಮಕ್ಕಳ ಸೀರೆ, ರವಿಕೆ, ಹರಿದು ಅಪಮಾನಿಸಿದ್ದು, ಪ್ರಾಣಿಗಳ ರೀತಿಯಲ್ಲಿ ಹೊಡೆದು ಹೇಯ ಕೃತ್ಯ ಎಸಗಿ ಕ್ರೂರ ಹಲ್ಲೆ ನಡೆಸಿ, ಸಿಳ್ಳೆ, ಕೇಕೆ, ಹಾಕಿ ಅಟ್ಟಹಾಸವನ್ನು ತೋರಿದ್ದಾರೆ. ಸವರ್ಣೀಯರಿಂದ ಹಲ್ಲೆಗೊಳಗಾದ 100ಕ್ಕೂ ಹೆಚ್ಚು ದಲಿತರ ತಲೆಗೆ ಏಟು ಬಿದ್ದಿದ್ದು, ಕೈಕಾಲು ಮುರಿದಿದ್ದು, ರಕ್ತ ಸುರಿದು ಹರಿದ ಬಟ್ಟೆಗಳಲ್ಲಿ ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಧಾವಿಸಿದ್ದರು ಸೂಕ್ತ ರಕ್ಷಣೆ ದೊರೆತಿಲ್ಲ. ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ 71 ದಲಿತರ ಮೇಲೆ ಕೌಂಟರ್ ಕೇಸ್ ದಾಖಲಿಸಿ ಅನ್ಯಾಯ ಮಾಡಿದ್ದಾರೆ.
ಸಿಂಧನೂರು ಮತ್ತು ಮಸ್ಕಿ ಕ್ಷೇತ್ರದ ಶಾಸಕರು ಬಲಾಢ್ಯ ಸವರ್ಣೀಯರ ಪರವಾಗಿದ್ದಾರೆ. ಹಲವಾರು ದಲಿತ ಕುಟುಂಬಗಳಿಗೂ ಸವರ್ಣೀಯರ ಭೂಮಾಲೀಕರ ದೌರ್ಜನ್ಯದಿಂದ ಬೇಸತ್ತು ಹುಟ್ಟಿದ ಊರನ್ನೇ ತೊರೆದು ಗುಳೆ ಹೋಗಿದ್ದಾರೆ. ತಿಡಿಗೋಳದಲ್ಲಿ ಭೀಕರ ಅಶಾಂತಿ ಪರಿಸ್ಥಿತಿಯಿದೆ. ದಲಿತರು ಭಯ ಭೀತಿಯಿಂದ ತತ್ತರಿಸಿದ್ದಾರೆ. ಆದರೂ ಪೊಲೀಸರು ಯಾವೊಬ್ಬ ಆರೋಪಿಯನ್ನು ಕೂಡ ಬಂಧಿಸಿಲ್ಲ ಎಂದು ದೂರಿದರು.
ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿ ಅಂಗಡಿಗಳಲ್ಲಿ ಆಹಾರಧಾನ್ಯ ಕೊಡುವಂತಿಲ್ಲ. ಕ್ಷೌರ ಮಾಡುವಂತಿಲ್ಲ. ಕುಡಿಯುವ ನೀರು ಕೊಡುತ್ತಿಲ್ಲ, ದಲಿತರ ಜೊತೆಗೆ ಮಾತನಾಡಿದ ಸವರ್ಣೀಯರಿಗೆ 5001 ದಂಡ ಎಂದು ಷರತ್ತು ವಿಧಿಸಲಾಗಿದೆ. ಸರ್ಕಾರ ಮಂಜೂರು ಮಾಡಿದ ಭೂಮಿಯನ್ನು ಕಿತ್ತುಕೊಂಡಿದ್ದಾರೆ. 2022ರಲ್ಲಿಯೂ ಕೂಡ ಜಾತ್ರೆ ಸಂದರ್ಭದಲ್ಲಿ ದೌರ್ಜನ್ಯ ನಡೆದಿತ್ತು.
2015 ರಲ್ಲಿ 17 ದಲಿತರ ಗುಡಿಸಲು ಸುಟ್ಟವರಿಗೆ ಶಿಕ್ಷೆಯಾಗಿಲ್ಲ. ರಾಜ್ಯದಲ್ಲಿ 15ಕ್ಕೂ ಹೆಚ್ಚು ಕೊಲೆ, ಅತ್ಯಾಚಾರ, ಹಲ್ಲೆ, ಬಹಿಷ್ಕಾರದಂತಹ ಗಂಭೀರ ಪ್ರಕರಣಗಳು ನಡೆದಿವೆ. ಇದುವರೆಗೂ ಶಾಸಕರು, ಗೃಹಸಚಿವರು, ಸಮಾಜಕಲ್ಯಾಣ ಸಚಿವರು ಆದಿಯಾಗಿ ಮುಖ್ಯಮಂತ್ರಿ ಸಂತ್ರಸ್ತ ದಲಿತರಿಗೆ ನ್ಯಾಯ ನೀಡಲು ಪ್ರಯತ್ನಿಸಿಲ್ಲ.
ಹದ್ದಿನಾಳದ ಭೂಮಾನಂದನ ಕಗ್ಗೋಲೆ, ಸಿರವಾರ ಹೊಕ್ರಾಣಿ ಗ್ರಾಮದ ಅಶ್ವಿನಿ ಮತ್ತು ಕರಡಕಲ್ ಗ್ರಾಮದ ರೇಣಮ್ಮನ ಮೇಲೆ ಅತ್ಯಾಚಾರ ಕೊಲೆ, ಮಾನ್ವಿ ರಮೇಶ ನಕ್ಕುಂದಿ ಯುವಕನ ಕೊಲೆ, ಈಚನಾಳ ಗ್ರಾಮದಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ, ಕಲ್ಬುರ್ಗಿ ಸೇಡಂನ ಉಡಗಿಯಲ್ಲಿ ದಲಿತ ಯುವಕನ ಕೊಲೆ, ಹೀಗೆ ಇಡೀ ರಾಜ್ಯದಾದ್ಯಂತ ದಲಿತರ ಮೇಲೆ ನಡೆದ ದಬ್ಬಾಳಿಕೆ ನಡೆಸಿ 18 ಜಿಲ್ಲೆಗಳಲ್ಲಿ ಬಹಿಷ್ಕಾರ ಸರ್ಕಾರ ಮಧ್ಯೆ ಪ್ರವೇಶಿಸಿ ಸರಿ ಮಾಡದಿದ್ದರೆ, ರಾಜ್ಯದಾದ್ಯಂತ “ಜನ ಜಾಗೃತಿ ಆಂದೋಲನ” ನಡೆಸಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಜೊತೆಗೆ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತಿ, 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ: ಬಸವ ಹರಳಯ್ಯ ಮಹಾಸ್ವಾಮಿ ಚಿತ್ರದುರ್ಗ, ಬಸವರಾಜ ಕಲ್ಬುರ್ಗಿ, ಜಿಲ್ಲಾಧ್ಯಕ್ಷರಾದ ಅಶೋಕ ನಂಜಲದಿನ್ನಿ, ಬೈಲಾ ಹೊನ್ನಯ್ಯ, ವಿಶ್ವ ನಾರಾಯಣ ಮೂರ್ತಿ, ಗುರುಮೂರ್ತಿ ಚಿತ್ರದುರ್ಗ, ಡಿಎಸ್ಎಸ್ ಜಿಲ್ಲಾ ಉಪಾಧ್ಯಕ್ಷ ಶಿವಮೂರ್ತಿ ಎಚ್, ಲಕ್ಷ್ಮಿ ಪತ್ತಾರ್, ಜಯಪ್ರಕಾಶ ಹಿರಿಯೂರು, ಶ್ರೀನಿವಾಸ ಭಂಡಾರಿ ಬಳ್ಳಾರಿ, ಸೇರಿದಂತೆ ದಸಸ ಸಮಿತಿಯ ಅನೇಕ ಸದಸ್ಯರಿದ್ದರು.
