ಸಿಂಧನೂರು: ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳು, ಶಿಸ್ತು, ಸೇವಾ ಮನೋಭಾವ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಎನ್‌ಎಸ್‌ಎಸ್ ರಾಯಚೂರು ಜಿಲ್ಲಾ ನೋಡಲ್ ಅಧಿಕಾರಿ ಸಿದ್ಧನಗೌಡ ಹೇಳಿದರು.

 

ತಾಲೂಕಿನ ಅಲಬನೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ 2026-27ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 

ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕ ಸಾಧನೆಗೆ ಸೀಮಿತವಾಗದೆ ಸಮಾಜದ ಸಮಸ್ಯೆಗಳನ್ನು ಅರಿತುಕೊಂಡು, ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಎನ್‌ಎಸ್‌ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಪರಸ್ಪರ ಸಹಕಾರ, ಆತ್ಮವಿಶ್ವಾಸ ಹಾಗೂ ನಾಯಕತ್ವದ ಸಾಮರ್ಥ್ಯವನ್ನು ವೃದ್ಧಿಸಲು ಉತ್ತಮ ವೇದಿಕೆಯಾಗಿವೆ ಎಂದು ತಿಳಿಸಿದರು.

 

ಕಾರ್ಯಕ್ರಮದ ಧ್ವಜಾರೋಹಣವನ್ನು ಅಲಬನೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಯ್ಯಪ್ಪ ಮೇಟಿ ಹಾಗೂ ‘ಸುದ್ದಿಮೂಲ’ ಪತ್ರಿಕೆಯ ವರದಿಗಾರ ಅಮರೇಶ ಅಲಬನೂರು ಅವರು ಜಂಟಿಯಾಗಿ ನೆರವೇರಿಸಿದರು.

 

ಎನ್‌ಎಸ್‌ಎಸ್ ಶಿಬಿರಾಧಿಕಾರಿ ರವಿ ಬಿ. ಸಾಸಲಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರಾಜ ಅಡಗಲ್ ಅವರು ಶಿಬಿರಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನೆಯ ಪ್ರತಿಜ್ಞಾವಿಧಿ ಬೋಧಿಸಿದರು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ಎಸ್. ಶಿವರಾಜ ವಹಿಸಿದ್ದರು. ಉಪನ್ಯಾಸಕರಾದ ಮಹಿಬೂಬ್ ಕೆ., ಪಂಪಾಪತಿ ಕಲ್ಮಂಗಿ, ಮೌನೇಶ ಬಳಗನೂರು ಹಾಗೂ ಶಂಕರಗೌಡ ಬೂತಲದಿನ್ನಿ ಉಪಸ್ಥಿತರಿದ್ದರು.

 

ಪ್ರೊ. ಎಂ.ಡಿ. ನಂಜುಂಡಸ್ವಾಮಿ ತಂಡದ ನಾಯಕಿ ಮಮತಾ ಹೆಚ್. ಬೆಳಗುರ್ಕಿ ಕಾರ್ಯಕ್ರಮ ನಿರೂಪಿಸಿದರು. ಮಂಜುಳಾ ಬಾದರ್ಲಿ ಹಾಗೂ ಉಷಾ ವಳಬಳ್ಳಾರಿ ಪ್ರಾರ್ಥಿಸಿದರು. ವಸಂತ ಹರೇಟನೂರು ಮತ್ತು ಅಮೃತ ಮಾಡಶಿರವಾರ ಸ್ವಾಗತಿಸಿದರು. ಸವಿತಾ ಬೆಳಗುರ್ಕಿ ವಂದಿಸಿದರು.

Leave a Reply

Your email address will not be published. Required fields are marked *