ರಾಯಚೂರು, ನ.5:** ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ದಲಿತರ ಮೇಲೆ ನಡೆದ ಸಾಮೂಹಿಕ ಹಲ್ಲೆ ಹಾಗೂ ಜಾತಿ ನಿಂದನೆ ಪ್ರಕರಣವನ್ನು ಖಂಡಿಸಿ, ಸಂತ್ರಸ್ತರಿಗೆ ನೈತಿಕ ಬೆಂಬಲ ಸೂಚಿಸುವ ಉದ್ದೇಶದಿಂದ ನವೆಂಬರ್ 8ರಂದು ‘ತಿಡಿಗೋಳ ಚಲೋ’ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಎಸ್. ಮಾರೆಪ್ಪ ತಿಳಿಸಿದರು.

 

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 18ರಂದು ತಿಡಿಗೋಳ ಗ್ರಾಮದಲ್ಲಿ ನಡೆದ ಆಂಜನೇಯ ಸ್ವಾಮಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಪರಿಶಿಷ್ಟ ಜಾತಿಯ ಯುವಕರ ಮೇಲೆ ಸವರ್ಣೀಯರ ತಂಡ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದೆ. ಈ ಘಟನೆ ನಡೆದು ಹಲವು ದಿನಗಳು ಕಳೆದಿದ್ದರೂ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿಲ್ಲ. ಇದರಿಂದ ಸಂತ್ರಸ್ತ ಕುಟುಂಬಗಳು ಹಾಗೂ ದಲಿತ ಸಮುದಾಯದ ಜನರಲ್ಲಿ ಆತಂಕ ಮುಂದುವರಿದಿದೆ ಎಂದು ಆರೋಪಿಸಿದರು.

 

ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಸಂತ್ರಸ್ತರಿಗೆ ನ್ಯಾಯ ಮತ್ತು ಭದ್ರತೆಯ ಭರವಸೆ ನೀಡಬೇಕಾದ ಅಗತ್ಯವಿದೆ. ದೌರ್ಜನ್ಯಕ್ಕೊಳಗಾದ ಕುಟುಂಬಗಳ ನೋವಿಗೆ ಸ್ಪಂದಿಸುವುದು ಹಾಗೂ ಅವರ ಹೋರಾಟಕ್ಕೆ ನೈತಿಕ ಬೆಂಬಲ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬೈಕ್ ರ‍್ಯಾಲಿ ಆಯೋಜಿಸಲಾಗಿದೆ ಎಂದರು.

 

**ಅನುಮತಿ ನಿರಾಕರಿಸಿದರೂ ಹೋರಾಟ ನಿಲ್ಲದು**

 

‘ತಿಡಿಗೋಳ ಚಲೋ’ ಬೈಕ್ ರ‍್ಯಾಲಿಗೆ ಸಿಂಧನೂರು ಡಿವೈಎಸ್ಪಿ ಚಂದ್ರಶೇಖರ್ ಅವರು ಅನುಮತಿ ನಿರಾಕರಿಸಿದ್ದಾರೆ. ಆದರೂ ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಲಾಗುವುದು. ಸಂತ್ರಸ್ತರಿಗೆ ನ್ಯಾಯ ದೊರೆಯಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದ್ದು, ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

 

ದಲಿತರ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಿಗಳ ಬಂಧನ ವಿಳಂಬವಾಗುತ್ತಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಕಾನೂನು ಎಲ್ಲರಿಗೂ ಸಮಾನವಾಗಿದ್ದು, ದೌರ್ಜನ್ಯ ಎಸಗಿದವರ ವಿರುದ್ಧ ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಮಣಿಯದೆ ಕಾನೂನು ಕ್ರಮ ಜರುಗಿಸಬೇಕು. ಸಂತ್ರಸ್ತರಿಗೆ ನ್ಯಾಯ ದೊರೆಯುವಂತೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

 

**ಶಾಸಕರ ವಿರುದ್ಧ ಅಸಮಾಧಾನ**

 

ಘಟನೆ ನಡೆದು ಹಲವು ದಿನಗಳಾದರೂ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಅವರು ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿಲ್ಲ. ಜನಪ್ರತಿನಿಧಿಗಳು ಸಂಕಷ್ಟದಲ್ಲಿರುವ ಜನರ ಪರವಾಗಿ ನಿಲ್ಲಬೇಕಾದ ಸಂದರ್ಭದಲ್ಲಿ ಮೌನ ವಹಿಸಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

 

ದಲಿತರ ಮೇಲಿನ ದೌರ್ಜನ್ಯ, ಜಾತಿ ನಿಂದನೆ ಹಾಗೂ ಸಾಮಾಜಿಕ ಬಹಿಷ್ಕಾರದಂತಹ ಘಟನೆಗಳು ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುತ್ತವೆ. ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಆಡಳಿತ ವ್ಯವಸ್ಥೆಯ ಕರ್ತವ್ಯವಾಗಿದೆ. ಗ್ರಾಮದಲ್ಲಿ ಮತ್ತೆ ಇಂತಹ ಘಟನೆಗಳು ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.

 

ತಿಡಿಗೋಳ ಗ್ರಾಮದ ಸಂತ್ರಸ್ತರಿಗೆ ನೈತಿಕ ಧೈರ್ಯ ತುಂಬುವ ಜೊತೆಗೆ ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಸಂಘಟಿತ ಹೋರಾಟದ ಸಂದೇಶ ಸಾರುವುದು ಈ ರ‍್ಯಾಲಿಯ ಉದ್ದೇಶವಾಗಿದೆ. ನವೆಂಬರ್ 8ರಂದು ನಡೆಯುವ ‘ತಿಡಿಗೋಳ ಚಲೋ’ ಹೋರಾಟದ ಮೂಲಕ ಪ್ರಕರಣದತ್ತ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಗಮನ ಸೆಳೆಯಲಾಗುವುದು ಎಂದು ಎಸ್. ಮಾರೆಪ್ಪ ತಿಳಿಸಿದರು.

 

ಸುದ್ದಿಗೋಷ್ಠಿಯಲ್ಲಿ ರವೀಂದ್ರನಾಥ ಪಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಹೇಮರಾಜ ಅಸ್ಕಿಹಾಳ, ಎಂ.ಆರ್. ಭೇರಿ, ಶರಣಪ್ಪ ದಿನ್ನಿ, ಭೀಮಣ್ಣ ಮರ್ಚಟ್ಟಾಳ, ಜೈಭೀಮ ವಲ್ಲಭ್ ಹಾಗೂ ಲಕ್ಷ್ಮಣ ಕಲ್ಲೂರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *