ಭುವನೇಶ್ವರ: ಮಕ್ಕಳ ಹಕ್ಕುಗಳ ರಕ್ಷಣೆ, ಆನ್‌ಲೈನ್ ಸುರಕ್ಷತೆ ಹಾಗೂ ಬಾಲ್ಯವಿವಾಹ ಮುಕ್ತ ಸಮಾಜ ನಿರ್ಮಾಣದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಒಡಿಶಾ ರಾಜ್ಯದ ರಾಜಧಾನಿ ಭುವನೇಶ್ವರದ ಲೋಕಭವನ ಆಡಿಟೋರಿಯಂನಲ್ಲಿ ಮಹತ್ವದ ಕಾರ್ಯಕ್ರಮ ನಡೆಯಿತು.ಒಡಿಶಾ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ 16ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಪಾಟೀಲ್ ಹಾಗೂ ಆಯೋಗದ ಸದಸ್ಯರಾದ ಶ್ರೀ ಸತ್ಯನಾರಾಯಣ ಶೆಟ್ಟಿ ಸಿಂಧನೂರು ಅವರು ಭಾಗವಹಿಸಿ ಕಾರ್ಯಕ್ರಮದ ವಿಶೇಷ ಗಮನ ಸೆಳೆದರು.

 

ಮಕ್ಕಳ ಆನ್‌ಲೈನ್ ಸುರಕ್ಷತೆ ಇಂದಿನ ಡಿಜಿಟಲ್ ಯುಗದಲ್ಲಿ ಅತ್ಯಂತ ಪ್ರಮುಖ ವಿಷಯವಾಗಿದ್ದು, ಈ ಕುರಿತು ವಿವಿಧ ರಾಜ್ಯಗಳ ಮಕ್ಕಳ ಹಕ್ಕುಗಳ ಆಯೋಗಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯ ಹಾಗೂ ಅನುಭವಗಳನ್ನು ಹಂಚಿಕೊಂಡರು. ಆಂಧ್ರಪ್ರದೇಶ, ಅಸ್ಸಾಂ ಮತ್ತು ಒಡಿಶಾ ರಾಜ್ಯಗಳ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಹಾರಾಷ್ಟ್ರ ರಾಜ್ಯದ ಆಯೋಗದ ಸದಸ್ಯರು ಕೂಡ ಉಪಸ್ಥಿತರಿದ್ದರು.

 

ತಂತ್ರಜ್ಞಾನ ವರದಾನವಾಗಲಿ, ಮಕ್ಕಳಿಗೆ ಶಾಪವಾಗದಿರಲಿ!

 

ಇಂದಿನ ದಿನಗಳಲ್ಲಿ ಮೊಬೈಲ್, ಇಂಟರ್‌ನೆಟ್ ಮತ್ತು ಸಾಮಾಜಿಕ ಜಾಲತಾಣಗಳು ಮಕ್ಕಳ ಶಿಕ್ಷಣ, ಜ್ಞಾನಾರ್ಜನೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿವೆ. ಆದರೆ ಇವುಗಳ ಅತಿಯಾದ ಬಳಕೆ ಮತ್ತು ದುರ್ಬಳಕೆಯಿಂದ ಮಕ್ಕಳು ವಿವಿಧ ಸಮಸ್ಯೆಗಳಿಗೆ ಒಳಗಾಗುತ್ತಿರುವುದು ಗಂಭೀರ ಚರ್ಚೆಗೆ ಕಾರಣವಾಯಿತು.ವಿಶೇಷವಾಗಿ ಆನ್‌ಲೈನ್ ಗೇಮಿಂಗ್ ಚಟ, ಅಪರಿಚಿತರೊಂದಿಗೆ ಆನ್‌ಲೈನ್ ಸಂಪರ್ಕ, ಸೈಬರ್ ಕಿರುಕುಳ, ಡಿಜಿಟಲ್ ವ್ಯಸನ ಹಾಗೂ ಮಕ್ಕಳ ವೈಯಕ್ತಿಕ ಮಾಹಿತಿಯ ದುರ್ಬಳಕೆಯಿಂದ ಉಂಟಾಗಬಹುದಾದ ಅಪಾಯಗಳ ಕುರಿತು ಉಪನ್ಯಾಸ ಮತ್ತು ಚರ್ಚೆಗಳು ನಡೆದವು. ಮಕ್ಕಳಿಗೆ ಸುರಕ್ಷಿತ ಡಿಜಿಟಲ್ ವಾತಾವರಣ ಕಲ್ಪಿಸುವಲ್ಲಿ ಪೋಷಕರು, ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಜವಾಬ್ದಾರಿಯ ಕುರಿತು ಒತ್ತಿಹೇಳಲಾಯಿತು.ಒಡಿಶಾವನ್ನು ಬಾಲ್ಯವಿವಾಹ ಮುಕ್ತ ರಾಜ್ಯವನ್ನಾಗಿಸುವ ಗುರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಒಡಿಶಾ ರಾಜ್ಯದ ಮುಖ್ಯಮಂತ್ರಿಗಳು ಮಾತನಾಡಿ, ರಾಜ್ಯವನ್ನು ಬಾಲ್ಯವಿವಾಹ ಮುಕ್ತ ರಾಜ್ಯವನ್ನಾಗಿ ಮಾಡುವುದಾಗಿ ಘೋಷಿಸಿದರು. ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸಲು ಬಾಲ್ಯವಿವಾಹ ತಡೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡುವ ಅಗತ್ಯವನ್ನು ಪ್ರತಿಪಾದಿಸಿದರು. ಒಡಿಶಾ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಮಾತನಾಡಿ, ಬಾಲಾಪರಾಧಗಳ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಮಕ್ಕಳ ಆನ್‌ಲೈನ್ ಸುರಕ್ಷತೆ ಕುರಿತು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಈ ಕಾರ್ಯ ಕೇವಲ ಒಂದು ಇಲಾಖೆಗೆ ಸೀಮಿತವಾಗದೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಒಡಿಶಾ ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಆದಿವಾಸಿ ಹಾಗೂ ಬುಡಕಟ್ಟು ಕಲ್ಯಾಣ ಇಲಾಖೆಗಳ ಸಚಿವರು ಉಪಸ್ಥಿತರಿದ್ದು, ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಭಾಗವಹಿಸಿದ್ದರು.

ಕರ್ನಾಟಕದ ಸಂಪನ್ಮೂಲ ವ್ಯಕ್ತಿಗಳಿಂದ ಭಾಗವಹಿಸುವಿಕೆ

 

ಈ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಸಂಪನ್ಮೂಲ ವ್ಯಕ್ತಿಗಳಾಗಿ ಕೊಪ್ಪಳ ಅಲ್ಪಸಂಖ್ಯಾತರ ಇಲಾಖೆಯ ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ವಿಜಯಕುಮಾರ್ ಪಾಟೀಲ್ ಹಾಗೂ ಚಿಕ್ಕಬಳ್ಳಾಪುರ ಡಯಟ್‌ನ ಉಪನ್ಯಾಸಕರಾದ ಶ್ರೀ ಆಂಜನೇಯ ಅವರು ಭಾಗವಹಿಸಿದ್ದರು.

 

ಕಾರ್ಯಕ್ರಮದ ಮತ್ತೊಂದು ಪ್ರಮುಖ ಘಟ್ಟದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ಪಾಟೀಲ್ ಹಾಗೂ ಸದಸ್ಯರಾದ ಶ್ರೀ ಸತ್ಯನಾರಾಯಣ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಮಕ್ಕಳ ಹಕ್ಕುಗಳ ರಕ್ಷಣೆಗೆ ರಾಜ್ಯಗಳ ನಡುವೆ ಸಮನ್ವಯ ಅಗತ್ಯ

 

ಮಕ್ಕಳ ಮೇಲಿನ ದೌರ್ಜನ್ಯ ತಡೆ, ಬಾಲ್ಯವಿವಾಹ ನಿರ್ಮೂಲನೆ, ಬಾಲಾಪರಾಧ ನಿಯಂತ್ರಣ, ಶಿಕ್ಷಣದ ಹಕ್ಕು, ಮಕ್ಕಳ ಸುರಕ್ಷತೆ ಹಾಗೂ ಡಿಜಿಟಲ್ ಜಗತ್ತಿನಲ್ಲಿನ ಅಪಾಯಗಳಿಂದ ಮಕ್ಕಳನ್ನು ರಕ್ಷಿಸುವುದು ಇಂದಿನ ಸಮಾಜದ ಪ್ರಮುಖ ಜವಾಬ್ದಾರಿಯಾಗಿದೆ.

 

ಈ ನಿಟ್ಟಿನಲ್ಲಿ ವಿವಿಧ ರಾಜ್ಯಗಳ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಒಂದೇ ವೇದಿಕೆಯಲ್ಲಿ ಸೇರಿ ವಿಚಾರ ವಿನಿಮಯ ನಡೆಸಿರುವುದು ಕಾರ್ಯಕ್ರಮದ ವಿಶೇಷತೆಯಾಗಿತ್ತು. ಮಕ್ಕಳಿಗೆ ಸುರಕ್ಷಿತ, ಸಮಾನ ಅವಕಾಶಗಳಿರುವ ಹಾಗೂ ಹಕ್ಕುಗಳನ್ನು ಗೌರವಿಸುವ ಸಮಾಜ ನಿರ್ಮಾಣಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂಬ ಸಂದೇಶಕಾರ್ಯಕ್ರಮದಲ್ಲಿ ವ್ಯಕ್ತವಾಯಿತ

 

 

Leave a Reply

Your email address will not be published. Required fields are marked *