ಹತ್ಯೆ, ಹಲ್ಲೆ ಪ್ರಕರಣಗಳ ವಿರುದ್ಧ ದೇವದುರ್ಗ ವಕೀಲರ ಸಂಘದಿಂದ ಪ್ರತಿಭಟನೆ – ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಆಕ್ರೋಶ
ದೇವದುರ್ಗ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹತ್ಯೆ, ಹಲ್ಲೆ, ಬೆದರಿಕೆ ಹಾಗೂ ದೌರ್ಜನ್ಯ ಪ್ರಕರಣಗಳನ್ನು ತೀವ್ರವಾಗಿ ಖಂಡಿಸಿ, ವಕೀಲರ ವೃತ್ತಿ ಸುರಕ್ಷತೆಗೆ ಸೂಕ್ತ ಕಾನೂನು ರಕ್ಷಣೆ ಒದಗಿಸುವಂತೆ ಆಗ್ರಹಿಸಿ ದೇವದುರ್ಗ ವಕೀಲರ ಸಂಘದ ವತಿಯಿಂದ ಮಂಗಳವಾರ ನ್ಯಾಯಾಲಯದ ಆವರಣದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ರಾಜ್ಯಾದ್ಯಂತ ವಕೀಲರ ಸಂಘಟನೆಗಳು ಹಮ್ಮಿಕೊಂಡಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ದೇವದುರ್ಗದ ವಕೀಲರು, ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಸರ್ಕಾರದ ಗಮನ ಸೆಳೆದರು. ಬಳಿಕ ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿಪತ್ರವನ್ನು ತಹಶೀಲ್ದಾರ್ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎಂ. ಮೌನೇಶ್ವರ ಹಾಗೂ ಹಿರಿಯ ನ್ಯಾಯವಾದಿ ವೇಣುಗೋಪಾಲಗೌಡ ಪಾಟೀಲ ಜಾಲಹಳ್ಳಿ ಅವರು, ವಕೀಲರು ಕೇವಲ ನ್ಯಾಯಾಲಯಗಳಲ್ಲಿ ವಾದ ಮಂಡಿಸುವವರಲ್ಲ. ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ಕಾನೂನುಬದ್ಧ ನ್ಯಾಯ ದೊರಕಿಸಿಕೊಡುವ ಜವಾಬ್ದಾರಿಯನ್ನು ಹೊತ್ತಿರುವವರು. ಅನ್ಯಾಯಕ್ಕೊಳಗಾದ ಜನಸಾಮಾನ್ಯರ ಪರವಾಗಿ ನಿಂತು ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ನಡೆಸುವ ವಕೀಲರ ಮೇಲೆಯೇ ಹಲ್ಲೆ, ಹತ್ಯೆ ಹಾಗೂ ದೌರ್ಜನ್ಯಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ವಕೀಲರು ತಮ್ಮ ವೃತ್ತಿಯ ಭಾಗವಾಗಿ ವಿವಿಧ ಪ್ರಕರಣಗಳಲ್ಲಿ ಕಕ್ಷಿದಾರರ ಪರವಾಗಿ ನ್ಯಾಯಕ್ಕಾಗಿ ಹೋರಾಡುವಾಗ ಕೆಲವರ ವಿರೋಧ ಮತ್ತು ಬೆದರಿಕೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ವಕೀಲರ ಜೀವಕ್ಕೆ ಯಾವುದೇ ಭದ್ರತೆ ಇಲ್ಲದಂತಾಗಿದೆ. ವಕೀಲರ ಮೇಲೆ ನಡೆಯುವ ದಾಳಿಗಳು ಅವರ ವೈಯಕ್ತಿಕ ಸುರಕ್ಷತೆಗೆ ಮಾತ್ರವಲ್ಲದೆ ನ್ಯಾಯ ವ್ಯವಸ್ಥೆಯ ಸ್ವತಂತ್ರ ಕಾರ್ಯನಿರ್ವಹಣೆಗೂ ಸವಾಲಾಗಿವೆ ಎಂದು ಅಭಿಪ್ರಾಯಪಟ್ಟರು.
ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಂದ ವೃತ್ತಿ ನಿರ್ವಹಣೆಯಲ್ಲಿ ಅಭದ್ರತೆಯ ಭಾವನೆ ಹೆಚ್ಚುತ್ತಿದೆ. ಯಾವುದೇ ಭಯ ಅಥವಾ ಒತ್ತಡವಿಲ್ಲದೆ ಕಕ್ಷಿದಾರರ ಪರವಾಗಿ ವಾದ ಮಂಡಿಸಲು ಮತ್ತು ಸಾರ್ವಜನಿಕರಿಗೆ ಕಾನೂನು ನೆರವು ನೀಡಲು ಸುರಕ್ಷಿತ ವಾತಾವರಣ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ವಕೀಲರ ರಕ್ಷಣೆಗೆ ವಿಶೇಷ ಕಾನೂನು ರೂಪಿಸಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ, ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಕೆಲಸ-ಕಾರ್ಯಗಳ ನಿಮಿತ್ತ ಭೇಟಿ ನೀಡುವ ವಕೀಲರಿಗೆ ಸೂಕ್ತ ಗೌರವ ಮತ್ತು ಸ್ಪಂದನೆ ದೊರೆಯುತ್ತಿಲ್ಲ ಎಂಬ ಅಸಮಾಧಾನವನ್ನೂ ವ್ಯಕ್ತಪಡಿಸಿದರು. ವಕೀಲರ ವೃತ್ತಿಪರ ಗೌರವವನ್ನು ಅಧಿಕಾರಿಗಳು ಎತ್ತಿಹಿಡಿಯಬೇಕು ಹಾಗೂ ಅವರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ವಕೀಲರ ಮೇಲಿನ ಹಲ್ಲೆ ಮತ್ತು ಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ತ್ವರಿತ ಕಾನೂನು ಕ್ರಮ ಕೈಗೊಳ್ಳಬೇಕು. ವಕೀಲರಿಗೆ ಅಗತ್ಯ ಪೊಲೀಸ್ ರಕ್ಷಣೆ ಒದಗಿಸುವುದರ ಜತೆಗೆ, ಅವರ ಸುರಕ್ಷತೆ ಮತ್ತು ವೃತ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸುವ ಸಮಗ್ರ ಕಾನೂನು ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯಾದ್ಯಂತ ವಕೀಲರ ಸಂಘಟನೆಗಳು ಒಗ್ಗಟ್ಟಿನಿಂದ ನಡೆಸುತ್ತಿರುವ ಈ ಹೋರಾಟಕ್ಕೆ ದೇವದುರ್ಗ ವಕೀಲರ ಸಂಘ ಬೆಂಬಲ ಸೂಚಿಸಿದ್ದು, ವಕೀಲರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಶೀಘ್ರ ಪರಿಹಾರ ಕಲ್ಪಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ,
