ಬಳ್ಳಾರಿ / ಕಂಪ್ಲಿ : ಪ್ರತಿ ವರ್ಷದಂತಾಗಿದ್ದರೆ ಈ ಹೊತ್ತಿಗೆ ಕಂಪ್ಲಿ ಕೋಟೆಯಲ್ಲಿನ ತುಂಗಭದ್ರಾ ನದಿಯು ಮೈದುಂಬಿ ಹರಿಯುವುದರ ಜೊತೆಗೆ ನದಿ ಅಕ್ಕ ಪಕ್ಕದ ಜಮೀನುಗಳ ಹಸಿರಿನಿಂದ ಕಂಗೋಳಿಸಬೇಕಾಗಿತ್ತು. ಆದರೆ, ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆಗಳು ಕೈಕೊಟ್ಟ ಹಿನ್ನೆಲೆಯಲ್ಲಿ ಜೀವನ ನಾಡಿ ತುಂಗಭದ್ರಾ ಜಲಾಶಯಕ್ಕೆ ನೀರಿನ ಹರಿವು ಇಲ್ಲದೇ ಇರುವುದರಿಂದ ನದಿಗೆ ನೀರು ಇಲ್ಲ. ಇತ್ತ ಕಂಪ್ಲಿ ಕೋಟೆಯಲ್ಲಿ ಹರಿದಿರುವ ತುಂಗಭದ್ರೆಯ ಒಡಲು ಬರಿದಾಗಿದ್ದು ಜನ ಜಾನುವಾರುಗಳು ಸಂಕಷ್ಟ ಪಡುವಂತಾಗಿದೆ.
ಕಳೆದ ವರ್ಷ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆಗಳು ಉತ್ತಮವಾಗಿ ಸುರಿದಿದ್ದರಿಂದ ಜೀವನ ನಾಡಿ ತುಂಗಭದ್ರಾ ಜಲಾಶಯಕ್ಕೆ ಉತ್ತಮವಾಗಿ ನೀರು ಬಂದಿದ್ದರಿಂದ ನದಿಗೂ ನೀರು ಬಿಟ್ಟಿದ್ದರಿಂದ ಕಂಪ್ಲಿ ಕೋಟೆಯಲ್ಲಿ ತುಂಗಭದ್ರೆ ಮೈದುಂಬಿ ಹರಿಯುತ್ತಿದ್ದಳು. ಆದರೆ ಈ ವರ್ಷ ಮಳೆಯೂ ಇಲ್ಲ ನೀರು ಇಲ್ಲದೇ ಇರುವುದರಿಂದ ತುಂಗಭದ್ರೆಯ ಒಡಲು ಬರಿದಾಗಿದೆ. ಜೊತೆಗೆ ಬರಿದಾದ ನದಿಯ ಒಡಲಿನಲ್ಲಿ ಅಕ್ರಮ ಮರಳು ದಂಧೆ ವಿಪರೀತವಾಗಿ ನಡೆಯುತ್ತಿದ್ದು, ನದಿಯಲ್ಲಿ ಎಲ್ಲೆಂದರಲ್ಲಿ ಬೃಹತ್ ಕುಣಿಗಳೇ ಕಾಣುತ್ತಿದ್ದು, ನದಿಗೆ ಮೇಯಲು ಹೋದ ಜಾನುವಾರುಗಳು ಸಾವನ್ನಪ್ಪುತ್ತಿವೆ.
ಕಳೆದ ವರ್ಷ ಜು.7ರ ಒತ್ತಿಗೆ ಜೀವನದಿ ತುಂಗಭದ್ರಾ ಜಲಾಶಯಕ್ಕೆ ಸುಮಾರು 55 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿತ್ತು.ನದಿಗೆ ಸುಮಾರು 61 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಟ್ಟಿದ್ದರಿಂದ ಕಂಪ್ಲಿ ಕೋಟೆಯಲ್ಲಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿತ್ತು.
ಈ ವರ್ಷ ಕಂಪ್ಲಿ ಕೋಟೆಯಲ್ಲಿ ತುಂಗಭದ್ರಾ ನದಿ ಒಣಗಿ ಹೋಗಿದ್ದು, ಅಲ್ಲಲ್ಲಿ ಮಾತ್ರ ತಗ್ಗು ಪ್ರದೇಶದಲ್ಲಿ ಮಾತ್ರ ನೀರು ನಿಂತಿರುವುದು ಕಂಡು ಬರುತ್ತಿದ್ದು, ನದಿ ಪಾತ್ರದಲ್ಲಿ ಅಲ್ಲಲ್ಲಿ ಮಕ್ಕಳು ಕ್ರಿಕೇಟ್ ಮೈದಾನ ಮಾಡಿಕೊಂಡು ಕ್ರಿಕೇಟ್ ಆಡುವುದು ಕಂಡು ಬರುತ್ತಿದೆ.
ಇದೀಗ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಜಾಲಶಯಕ್ಕೆ ಕಳೆದರೆಡು ದಿನಗಳಿಂದ ಒಳ ಹರಿವು ಆರಂಭವಾಗಿದ್ದು, ಜಲಾನಯನ ಪ್ರದೇಶದಲ್ಲಿ ಇನ್ನು ವ್ಯಾಪಕವಾಗಿ ಮಳೆಯಾದರೆ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದು ಈ ತಿಂಗಳ ಅಂತ್ಯಕ್ಕೆ ಅಥವಾ ಆಗಷ್ಟ ತಿಂಗಳ ಆರಂಭದಲ್ಲಿಯಾದರೂ ನದಿಗೆ ನೀರು ಬರಬಹುದೆಂದು ಸಾರ್ವಜನಿಕರು, ರೈತರು ನಿರೀಕ್ಷಿಸುತ್ತಿದ್ದಾರೆ.

ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ತುಂಗಭದ್ರಾ ಜಲಾಶಯದ ಮಡಿಲು ತುಂಬಿದ ಹಿನ್ನಲೆ ರೈತರು ಮೊದಲ ಬೆಳೆ ತೆಗೆದುಕೊಂಡಿದ್ದಾರೆ. ಆದರೆ, ನಂತರದಲ್ಲಿ ಕ್ರಸ್ಟ್ ಗೇಟ್ ದುರಸ್ಥಿಯಿಂದಾಗಿ ಹಿಂಗಾರಿನ ಬೇಸಿಗೆ ಬೆಳೆಗೆ ನೀರಿಲ್ಲದಂತಾಯಿತು. ಒಂದು ಬೆಳೆ ಇಲ್ಲದೇ, ರೈತರು ಕಂಗಾಲಾಗಿದ್ದಾರೆ. ಈಗ ಹೊಸ ಕ್ರಸ್ಟ್ ಗೇಟ್‌ಯಿಂದ ರೈತರ ಬದುಕಿಗೆ ದಾರಿಯಾಗಲಿದೆ ಎಂಬ ಆಶಾಭಾಸವನೆ ಇತ್ತು. ಆದರೆ, ಮುಂಗಾರು ಮಳೆಗಳು ಕೈಕೊಟ್ಟ ಪರಿಣಾಮ ಜಲಾಶಯದಲ್ಲಿ ನೀರು ಇಲ್ಲದೇ ಇರುವುದರಿಂದ ನದಿ ಬರಿದಾಗಿದೆ. ಇದರಿಂದ ರೈತರಲ್ಲಿ ಆತಂಕದ ಛಾಯೆ ಮೂಡಿದೆ. ಇನ್ನೂ ಮಳೆ ಬರುವ ಸಾಧ್ಯತೆಯ ಆಶಾಭಾವನೆಯಲ್ಲಿ ರೈತರಿದ್ದಾರೆ.
ಬಿ. ಮಕುಬುಲ್ , ರೈತ, ಕೋಟೆ ಕಂಪ್ಲಿ .

Leave a Reply

Your email address will not be published. Required fields are marked *