ಜಾಲಹಳ್ಳಿ, ಜುಲೈ 10: ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಜಾಲಹಳ್ಳಿ ಪೊಲೀಸ್ ಠಾಣೆ ವತಿಯಿಂದ ಪೊಲೀಸ್ ವ್ಯಾಪ್ತಿಯ ಜೆ.ಜೆ. ಪ್ರೌಢಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಜನರನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳ ಜಾಲ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು. ಕ್ಷಣಿಕ ಸಂತೋಷಕ್ಕಾಗಿ ಮಾದಕ ವ್ಯಸನಕ್ಕೆ ಒಳಗಾಗುವುದರಿಂದ ಶಿಕ್ಷಣ, ಆರೋಗ್ಯ, ಕುಟುಂಬದ ನೆಮ್ಮದಿ ಹಾಗೂ ಭವಿಷ್ಯದ ಬದುಕು ಹಾಳಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದರು. ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ದುಷ್ಪರಿಣಾಮಗಳ ಕುರಿತು ವಿವರವಾಗಿ ಮಾಹಿತಿ ನೀಡಿ, ಆತ್ಮವಿಶ್ವಾಸ, ಉತ್ತಮ ಸ್ನೇಹ ಬಳಗ, ಕ್ರೀಡೆ, ಓದು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವ್ಯಸನಗಳಿಂದ ದೂರವಿರಬಹುದು ಎಂದು ಸಲಹೆ ನೀಡಲಾಯಿತು.
ಅಲ್ಲದೆ, ಗಾಂಜಾ, ಡ್ರಗ್ಸ್ ಸೇರಿದಂತೆ ಯಾವುದೇ ಮಾದಕ ವಸ್ತುಗಳ ಮಾರಾಟ, ಸಾಗಣೆ ಅಥವಾ ಬಳಕೆ ಕಾನೂನುಬಾಹಿರವಾಗಿದ್ದು, ಇಂತಹ ಚಟುವಟಿಕೆಗಳ ಬಗ್ಗೆ ಮಾಹಿತಿ ದೊರೆತರೆ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ನಿರ್ಮೂಲನೆ ಕುರಿತು ಪ್ರತಿಜ್ಞೆ ಬೋಧಿಸಿ, ಸಮಾಜದಲ್ಲಿ ವ್ಯಸನ ಮುಕ್ತ ವಾತಾವರಣ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಜಾಲಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *