ತಾಳಿಕೋಟಿ: ಬಾಲ್ಯದಿಂದಲೇ ಹೆತ್ತವರಿಂದ ಶ್ರೇಷ್ಠ ಸಂಸ್ಕಾರಗಳನ್ನು ಪಡೆದುಕೊಂಡು ಬೆಳೆದ ಕಿತ್ತೂರು ರಾಣಿ ಚೆನ್ನಮ್ಮ ವೈವಾಹಿಕ ಬದುಕಿನಲ್ಲಿಯೂ ನಮಗೆಲ್ಲರಿಗೆ ಮಾದರಿ ಯೋಗ್ಯವಾಗಿದ್ದಾಳೆ ಎಂದು ಹಿಕ್ಕನಗುತ್ತಿ ಲಿಂಗಾಯತ ಮಹಾ ಮಠದ ಮ.ನಿ.ಪ್ರ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಹೇಳಿದರು. ಸೋಮವಾರ ಸಂಜೆ ಪಟ್ಟಣದ ರಾಜವಾಡೆ ಆವರಣದಲ್ಲಿ ಕಿತ್ತೂರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಯ 3ನೇ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡ ಪುರಾಣ ಕಾರ್ಯಕ್ರಮದಲ್ಲಿ ಚೆನ್ನಮ್ಮಳ ವಿವಾಹ ಮಹೋತ್ಸವದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಒಂದು ಕುಟುಂಬದಲ್ಲಿ ಶಾಂತಿ, ನೆಮ್ಮದಿ ಇರಬೇಕೆಂದರೆ ಆ ಕುಟುಂಬದ ಆದರ ಸ್ತಂಭವಾಗಿರುವ ಪತಿ ಪತ್ನಿಯ ಮಧ್ಯೆ ಪರಸ್ಪರ ತಿಳುವಳಿಕೆ ಪ್ರೀತಿ ಮತ್ತು ವಿಶ್ವಾಸ ಇರುವುದು ಅತ್ಯವಶ್ಯಕವಾಗಿದೆ ಸಂಸ್ಕಾರಯುತ ಪತ್ನಿ ತನ್ನ ಪತಿಯನ್ನು ಒಬ್ಬ ಮಹಾನ್ ವ್ಯಕ್ತಿಯನ್ನಾಗಿ ನಿರ್ಮಿಸುವ ಶಕ್ತಿ ಹೊಂದಿದ್ದಾಳೆ. ಯಾವ ಕಾರಣಕ್ಕೂ ಕುಟುಂಬಗಳು ಶಿಥಿಲಗೊಳ್ಳಬಾರದು ಅದು ಸಮಾಜವನ್ನು ದುರ್ಬಲಗೊಳಿಸುತ್ತದೆ. ಇವತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ನಮ್ಮ ಮೂಲ ಸಂಸ್ಕೃತಿ ಸಂಪ್ರದಾಯಗಳು ಹಾಳಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು. ನಿವೃತ್ತ ಸೈನಿಕ ಬಾಪುಗೌಡ ಪಾಟೀಲರ ಪತ್ನಿ ಗೀತಾ ಪಾಟೀಲ ಮಾತನಾಡಿ ದೇಶಕ್ಕಾಗಿ ತನ್ನನ್ನು ಸಮರ್ಪಿಸುವ ಮನೋಭಾವ ಎಲ್ಲರಲ್ಲೂ ಬರಬೇಕು. ಪ್ರತಿ ಮನೆಯಲ್ಲಿಯೂ ಒಬ್ಬ ಸೈನಿಕ ಹುಟ್ಟಿ ಬರುವಂತಹ ಕೆಲಸ ಆಗಬೇಕು ಇದಕ್ಕೆ ಪ್ರೇರಣೆ ನೀಡುವಂತಹ ಕಾರ್ಯ ಮಾಡಿದ ಸಮಿತಿಯವರಿಗೆ ಅಭಿನಂದಿಸುತ್ತೇನೆ ಎಂದರು. ವೇದಿಕೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳ ಸಾಂಕೇತಿಕ ವಿವಾಹವನ್ನು ಲಿಂಗಾಯತ ಧರ್ಮದ ವಿಧಿ ವಿಧಾನಗಳಂತೆ ನೆರವೇರಿಸಲಾಯಿತು. ಸಚಿನ್ ಮತ್ತು ಮೇಘಾ ಚಿತ್ತರಗಿ ಕಿತ್ತೂರು ಚೆನ್ನಮ್ಮ ಹಾಗೂ ಮಲ್ಲಸರ್ಜನ ವೇಷ ಭೂಷಣ ತೊಟ್ಟು ಎಲ್ಲರ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ದೇಶದ ಸೇವೆ ಗೈದು ನಿವೃತ್ತರಾದ ಸೈನಿಕರನ್ನು ಹಾಗೂ ಅವರ ಕುಟುಂಬವನ್ನು ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಹದೇವಪ್ಪ ಪಾಟೀಲ(ಮಿಣಜಗಿ),ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಪಾಲ ಸಂಗಮಿ, ನಿವೃತ್ತ ಸೇನಾಧಿಕಾರಿ ಮೊಹಮ್ಮದ್ ಯೂಸೂಫ ಹಾದಿಮನಿ,ಬಾಪುಗೌಡ ಪಾಟೀಲ, ವೀರಘಂಟೆಪ್ಪ ತಳ್ಳೊಳ್ಳಿ, ವಿಜಯಕುಮಾರ ಚೌಹಾಣ, ಸಿದ್ದನಗೌಡ ಚೌದ್ರಿ, ಮೊಹಮ್ಮದ್ ರಸೂಲ ಮುರಾಳ, ಬಿಳೇಭಾವಿ ಗ್ರಾಮದ ಹಿರಿಯರಾದ ಬಸವರಾಜ ಅರಸನಾಳ, ಮಲ್ಲಣ್ಣ ಪೂಜಾರಿ, ದೇವಣ್ಣ ಕಡಕಲ್, ಸೇವಾ ಸಮಿತಿಯ ಸದಸ್ಯರಾದ ವಿಶ್ವನಾಥ ಪಾಟೀಲ, ವಿದ್ಯಾ ವಿಶ್ವನಾಥ ಪಾಟೀಲ, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಹಾಗೂ ಸೇವಾ ಸಮಿತಿಯ ಸದಸ್ಯರು ಮತ್ತಿತರರು ಇದ್ದರು. ಕುಮಾರ ಭಾವಿಮನಿ,ಬಸನಗೌಡ ಬಿರಾದಾರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

