ರಾಯಚೂರು: ನಗರದ ವಾರ್ಡ್ ಸಂಖ್ಯೆ 27ರಲ್ಲಿ ಸ್ವಚ್ಛ ಸರ್ವೇಕ್ಷಣ ಅಭಿಯಾನದ ಅಂಗವಾಗಿ “ನನ್ನ ಜೀವನ–ನನ್ನ ಸ್ವಚ್ಛ ನಗರ” ಉಪಕ್ರಮದಡಿ ಆರ್‌ಆರ್‌ಆರ್ (Reduce, Recycle, Reuse) ಕೇಂದ್ರವನ್ನು ಬುಧವಾರ ಶಾಲಾ ವಿದ್ಯಾರ್ಥಿಗಳಿಂದ ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಅಧಿಕಾರಿಗಳು, ಪರಿಸರ ಸಂರಕ್ಷಣೆ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅತ್ಯಗತ್ಯವಾಗಿದೆ. ಮನೆಯಲ್ಲಿ ಬಳಕೆಯಾಗದೆ ಉಳಿದಿರುವ ಆದರೆ ಇನ್ನೂ ಉಪಯೋಗಕ್ಕೆ ಬರುವ ವಸ್ತುಗಳನ್ನು ಆರ್‌ಆರ್‌ಆರ್ ಕೇಂದ್ರಕ್ಕೆ ನೀಡುವ ಮೂಲಕ ಮರುಬಳಕೆಯ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ತಿಳಿಸಿದರು.

ಮಕ್ಕಳಲ್ಲಿ ಬಾಲ್ಯದಿಂದಲೇ ತ್ಯಾಜ್ಯ ವಿಂಗಡಣೆ ಹಾಗೂ ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕೇಂದ್ರ ಸ್ಥಾಪಿಸಲಾಗಿದೆ. ಮನೆಗಳಲ್ಲಿ ಬಳಸದೇ ಇರುವ ಬಟ್ಟೆಗಳು, ಪಾದರಕ್ಷೆಗಳು, ಪುಸ್ತಕಗಳು, ಆಟಿಕೆಗಳು ಹಾಗೂ ವಿವಿಧ ಪ್ಲಾಸ್ಟಿಕ್ ವಸ್ತುಗಳನ್ನು ಈ ಕೇಂದ್ರಕ್ಕೆ ತಂದು ನೀಡಬಹುದಾಗಿದೆ. ಅವುಗಳನ್ನು ಅಗತ್ಯವಿರುವವರಿಗೆ ತಲುಪಿಸುವುದರ ಜೊತೆಗೆ ಮರುಬಳಕೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ವಿವರಿಸಿದರು.

ಇದೇ ವೇಳೆ, ಒಣ ಮತ್ತು ತೇವ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಅಭ್ಯಾಸವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಸ್ವಚ್ಛತೆ ಕಾಪಾಡುವಲ್ಲಿ ಮಕ್ಕಳ ಪಾತ್ರವೂ ಮಹತ್ವದ್ದಾಗಿದ್ದು, ಅವರು ಕುಟುಂಬದ ಸದಸ್ಯರಲ್ಲೂ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಲಾಯಿತು.

ಈ ಆರ್‌ಆರ್‌ಆರ್ ಕೇಂದ್ರವು ವಾರ್ಡ್ ಸಂಖ್ಯೆ 27, 28 ಹಾಗೂ 29ರ ನಿವಾಸಿಗಳಿಗೆ ಸೇವೆ ಒದಗಿಸಲಿದ್ದು, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಘನತ್ಯಾಜ್ಯ ನಿರ್ವಹಣಾ ತಜ್ಞ ಶಫೀ, ಆರೋಗ್ಯ ನಿರೀಕ್ಷಕ ರವಿಕುಮಾರ್, ಮೇಲ್ವಿಚಾರಕರಾದ ನಿಜಾಮುದ್ದೀನ್, ರಮೇಶ್, ಸೈಯದ್ ಅಕ್ಬರ್ ಹುಸೇನ್, ಸಂತೋಷ್, ಸಮುದಾಯ ಸಂಚಾಲಕರಾದ ಸುನಿತಾ, ಪಿ.ಸಿ. ಸುಜಾತ, ಲಕ್ಷ್ಮೀದೇವಿ, ಪೌರಕಾರ್ಮಿಕರು, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *