ರಾಯಚೂರು ಜೂನ್ 17 (ಕರ್ನಾಟಕ ವಾರ್ತೆ): ಡಿಎಪಿ ಮತ್ತು ಯೂರಿಯಾ ರಸಗೊಬ್ಬರಗಳಿಗೆ ಪರ್ಯಾಯವಾಗಿ ರೈತರು ಸಂಯುಕ್ತ ಗೊಬ್ಬರಗಳನ್ನು ಬಳಸಬೇಕು ಎಂದು ರಾಯಚೂರು ಕೃಷಿ ಇಲಾಖೆ ಉಪ ನಿರ್ದೇಶಕರಾದ ನಹೀಂ ಹುಸೇನ್ ಅವರು ರೈತರಲ್ಲಿ ಮನವಿ ಮಾಡಿದ್ದಾರೆ.
ಜೂನ್ 17ರ ಬುಧವಾರ ದಂದು ನಗರದ ದಿ ರಾಯಚೂರು ಬಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರಿ ಸಂಘ ನಿಯಮಿತ ರಾಯಚೂರಿಗೆ ಭೇಟಿ ನೀಡಿ, ರೈರಿಗೆ ಮಾಹಿತಿ ನೀಡಿದರು.
ಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹದಿನೆಂಟು ಪೋಷಕಾಂಶಗಳ ಅಗತ್ಯವಿರುತ್ತದೆ. ಇವುಗಳಲ್ಲಿ ಇಂಗಾಲ ಜಲಜನಕ ಮತ್ತು ಆಮ್ಲಜನಕ ಸ್ವಾಭಾವಿಕವಾಗಿ ದೊರೆಯಲಿದ್ದು, ಗಾಳಿ ಮತ್ತು ನೀರಿನ ಮೂಲಕ ಸಸ್ಯಗಳಿಗೆ ಲಭ್ಯವಾಗುತ್ತವೆ. ಉಳಿದ ಹದಿನಾಲ್ಕು ಪೋಷಕಾಂಶಗಳಲ್ಲಿ ಸಾರಜನಕ, ಪೊಟ್ಯಾಷ್ ಹೆಚ್ಚಿನ ಪ್ರಮಾಣದಲ್ಲಿ ಬೇಕಿದ್ದು, ಇವುಗಳನ್ನು ಪ್ರಧಾನ ಪೋಷಕಾಂಶಗಳೆಂದು ಕರೆಯಲಾಗುತ್ತದೆ. ಕ್ಯಾಲ್ಸಿಯಂ, ಮೆಗ್ನಿಷಿಯಂ, ಗಂಧಕ, ಕಬ್ಬಿಣ, ಜಿಂಕ್ ಬೋರಾನ್, ತಾಮ್ರ, ಮ್ಯಾಂಗನೀಸ್, ಮಾಲಬ್ಬಿನಂ, ಕ್ಲೋರಿನ್ ಮತ್ತು ನಿಕಲ್ ಕಡಿಮೆ ಪ್ರಮಾಣದಲ್ಲಿ ಬೇಕಿದ್ದು. ಇವುಗಳನ್ನು ಲಘು ಪೋಷಕಾಂಶಗಳೆಂದು ವಿಂಗಡಿಸಲಾಗಿದೆ. ಇವುಗಳಲ್ಲಿ ಯಾವುದೇ ಒಂದು ಪೋಷಕಾಂಶ ಕೊರತೆಯಾದರೂ ಸಸ್ಯಗಳು ಸಮೃದ್ಧಿಯಾಗಿ ಬೆಳೆಯಲಾರವು. ಇದರಿಂದ ನೀರಿಕ್ಷಿತ ಇಳುವರಿ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ರೈತರು ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿಎಪಿ ಬಳಸುತ್ತಿದ್ದು, ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಅಂಶ ಮಾತ್ರವಿದ್ದು, ಪೊಟ್ಯಾಷ್ ಲಭ್ಯವಿರುವುದಿಲ್ಲ. ಪೊಟ್ಯಾಷ್ ಅಂಶವು ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯಕವಾಗಿದೆ. ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ ಸಾರಜನಕ, ರಂಜಕ ಮತ್ತು ಪೋಟ್ಯಾಶ್ ಯುಕ್ತ ಬಹಳಷ್ಟು ರಸಗೊಬ್ಬರಗಳು ಲಭ್ಯವಿದ್ದು, ಶಿಫಾರಸಿನಂತೆ ವಿವಿಧ ರಸಗೊಬ್ಬರಗಳ ಸಂಯೋಜನೆಯೊಂದಿಗೆ ಬಳಸಬೇಕು ಎಂದು ಸಲಹೆ ನೀಡಿದ್ದಾರೆ.
ಯೂರಿಯಾ ಗೊಬ್ಬರಕ್ಕೆ ಪರ್ಯಾಯವಾಗಿ ಸಾರಜನಿಕ ಯುಕ್ತ ಗೊಬ್ಬರಗಳಾದ ಅಮೋನಿಯಂ ಸಲ್ಫೇಟ್, ನೈಟ್ರೇಟ್ ಮತ್ತು ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್ ಅನ್ನು ಬಳಸಬಹುದು ಹಾಗೂ ಆಂP ರಸಗೊಬ್ಬರ ಪರ್ಯಾಯಾಗಿ ಸಂಯುಕ್ತ ರಸಗೊಬ್ಬರ ಗಳಾದ 10.26.26, 14.34.14, 20.20.0.13, 15.15.15 ಗಳನ್ನು ಬಳಕೆ ಮಾಡಲು ನೆರೆದಿದ್ದ ರೈತರಿಗೆ ಸಲಹೆ ನೀಡಿದರು.
ನ್ಯಾನೊ ಯೂರಿಯಾ ಮತ್ತು ನ್ಯಾನೊ ಯೂರಿಯಾ ಪ್ಲಸ್ ಅನ್ನು ಎಲೆಗಳ ಮೇಲೆ ಸಿಂಪಡಣೆ ಕೂಡ ಮಾಡಬಹುದಾಗಿದೆ ಎಂದರು.
ಇಲಾಖೆಯಲ್ಲಿ ವಿವಿಧ ಹಂತಗಳಲ್ಲಿ ಜರುಗುವ ತರಬೇತಿಗಳಲ್ಲಿ ಹಾಗೂ ಕಾರ್ಯಾಗಾರಗಳಲ್ಲಿ ರೈತರಿಗೆ ಹಾಗೂ ರಸಗೊಬ್ಬರ ಮಾರಾಟಗಾರರಿಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರಾಯಚೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ದೀಪಾ ಕುಲಕರ್ಣಿ ಸೇರಿದಂತೆ ಕೃಷಿ ಇಲಾಖೆಯ ವಿವಿಧ ಅಧಿಕಾರಿಗಳು, ದಿ ರಾಯಚೂರು ಬಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರಿ ಸಂಘ ನಿಯಮಿತದ ಅಧಿಕಾರಿ, ಸಿಬ್ಬಂದಿಗಳು ಹಾಗೂ ರೈತರು ಇದ್ದರು.

