ರಾಯಚೂರು ಜೂನ್ 16 (ಕರ್ನಾಟಕ ವಾರ್ತೆ): 2025ರ ಆಗಸ್ಟ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಪ್ರಧಾನಮಂತ್ರಿ ವಿಕಸಿತ ಭಾರತ ಉದ್ಯೋಗ ಯೋಜನೆಯು ಭಾರತದಲ್ಲಿ ಖಾಸಗಿ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಉದ್ಯೋಗ ಸೃಷ್ಟಿ ಯೋಜನೆಯಾಗಿದೆ ಎಂದು ರಾಯಚೂರಿನ ಪ್ರಾದೇಶಿಕ ಸಹಾಯಕ ಭವಿಷ್ಯ ನಿಧಿ ಆಯುಕ್ತರಾದ ನಿರಾಜ್ ಕುಮಾರ್ ಅವರು ಹೇಳಿದರು.
ಜೂನ್ 16ರ ಮಂಗಳವಾರ ದಂದು ನಗರದ ಇಪಿಎಫ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಯೋಜನಯಡಿ 1 ಲಕ್ಷ ಕೋಟಿ ರೂ. ವೆಚ್ಚದೊಂದಿಗೆ ಈ ಯೋಜನೆಯು 2025ರ ಆಗಸ್ಟ್ 1ರಿಂದ 2027ರ ಜುಲೈ 31ರ ಅವಧಿಯಲ್ಲಿ 3.5 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಎರಡು ವಿಭಾಗಗಳನ್ನು ಒಳಗೊಂಡಿದ್ದು, ಭಾಗ-ಎ ಮೊದಲ ಬಾರಿಗೆ ಕೆಲಸ ಮಾಡುವವರ ಮೇಲೆ ಗಮನ ಕೇಂದ್ರೀಕರಿಸಿದರೆ ಭಾಗ-ಬಿ ಉದ್ಯೋಗದಾತರು ಅಥವಾ ನಿಯೋಜಕರ ಮೇಲೆ ಗಮನ ಕೇಂದ್ರೀಕರಿಸಲಾಗಿದೆ ಎಂದರು.
ಈ ಮುನ್ನ ಈ ಯೋಜನೆಗೆ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಯೋಜನೆ ಎಂದು ಹೆಸರಿಸಲಾಗಿತ್ತು. 2025ರ ಆಗಷ್ಟ್ 1 ರಂದು ಯೋಜನೆಯ ಹೆಸರನ್ನು ವಿಕಸಿತ ಭಾರತ ಉದ್ಯೋಗ ಯೋಜನೆ ಎಂಬ ಹೆಸರನ್ನು ನೀಡಲಾಗಿದ್ದು, ಆ.15ರ ಸ್ವಾತಂತ್ರ‍್ಯ ದಿನಾಚರಣೆಯ ಭಾಷಣದ ವೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಈ ಯೋಜನೆಯನ್ನು ಘೋಷಿಸಿದರು ಎಂದರು.
ಯೋಜನೆಯಡಿಯಲ್ಲಿ ಖಾಸಗಿ ವಲಯದಲ್ಲಿ ತಮ್ಮ ಮೊದಲ ಉದ್ಯೋಗವನ್ನು ಪಡೆಯುವ ಯುವ ಉದ್ಯೋಗಿಳು 15,000 ರೂಪಾಯಿಗಳ ಪ್ರೋತ್ಸಾಹವನ್ನು ಪಡೆಯುತ್ತಾರೆ. ಅದನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಈ ಪ್ರೋತ್ಸಾಹಕವನ್ನು ಎರಡು ಕಂತುಗಳಲ್ಲಿ ವಿತರಿಸಲಾಗುತ್ತದೆ. ಮೊದಲನೆಯದು 6 ತಿಂಗಳ ಉದ್ಯೋಗವನ್ನು ಪೂರ್ಣಗೊಳಿಸಿದ ನಂತರ ಮತ್ತು ಎರಡನೆಯದು 12 ತಿಂಗಳುಗಳನ್ನು ಪೂರ್ಣಗೊಳಿಸಿದ ನಂತರ ನೀಡಲಾಗುತ್ತದೆ ಎಂದರು.
ಹೆಚ್ಚಿನ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಕಂಪನಿಗಳನ್ನು ಪ್ರೋತ್ಸಾಹಿಸಲು, ಸರ್ಕಾರವು ಎರಡು ವರ್ಷಗಳ ಅವಧಿಗೆ ಪ್ರತಿ ಉದ್ಯೋಗಿಗೆ ತಿಂಗಳಿಗೆ 3,000 ರೂ. ಪ್ರೋತ್ಸಾಹವನ್ನು ನೀಡುತ್ತದೆ. ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಗುರಿಯೊಂದಿಗೆ ಈ ವಲಯದ ಕಂಪನಿಗಳು ಹೆಚ್ಚುವರಿ ಎರಡು ವರ್ಷಗಳವರೆಗೆ ಮೂರನೇ ಮತ್ತು ನಾಲ್ಕನೇ ವರ್ಷದ ಉದ್ಯೋಗ ಈ ಪ್ರೋತ್ಸಾಹವನ್ನು ಪಡೆಯುತ್ತವೆ ಎಂದರು.
ಅರ್ಹತಾ ಮಾನದಂಡಗಳು ಈ ಯೋಜನೆಯು ನೌಕರರ ಭವಿಷ್ಯನಿಧಿ ಸಘಟನೆಯಲ್ಲಿ ನೋಂದಾಯಿಸಿಕೊಂಡಿರುವ, ಮೊದಲ ಬಾರಿಗೆ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವ ಮತ್ತು ಮಾಸಿಕ 1 ಲಕ್ಷ ರೂ.ದವರೆಗೆ ಸಂಬಳ ಹೊಂದಿರುವ ವ್ಯಕ್ತಿಗಳನ್ನು ಗುರಿಯಾಗಿರಿಸಿಕೊಂಡಿದೆ. ಉದ್ಯೋಗ ಸೃಷ್ಟಿಯನ್ನು ಮತ್ತಷ್ಟು ಉತ್ತೇಜಿಸಲು, ಸುಸ್ಥಿರ ಉದ್ಯೋಗವನ್ನು ಸೃಷ್ಟಿಸುವ ಕಂಪನಿಗಳಿಗೆ ಆರ್ಥಿಕ ಪ್ರೋತ್ಸಾಹಕಗಳನ್ನು ನೀಡಲಾಗುತ್ತದೆ ಎಂದರು.
ಉದ್ಯೋಗಿಯು 1 ಆಗಸ್ಟ್ 2025 ರಿಂದ 31 ಜುಲೈ 2025 ರ ನಡುವೆ ನೌಕರರ ಭವಿಷ್ಯ ನಿಧಿಗೆ ಸೇರಬೇಕು.
ಆಗಸ್ಟ್ 1, 2025ರ ಮೊದಲು ಅವರು ನೌಕರರ ಭವಿಷ್ಯ ನಿಧಿ ಸಂಘಟನೆಯ ಸದಸ್ಯರಾಗಿರಬಾರದು. ಆಗಸ್ಟ್ 2025 ಅಥವಾ ನಂತರ ಭವಿಷ್ಯನಿಧಿಯ ಕೊಡುಗೆಯನ್ನು ಪಡೆಯಬೇಕು. ಮಾಸಿಕ ಒಟ್ಟು ವೇತನವು ತಿಂಗಳಿಗೆ 1 ಲಕ್ಷ ರೂ. ಕ್ಕಿಂತ ಕಡಿಮೆಯಿರಬೇಕು ಎಂದರು.
ಜೂನ್ 19ರಂದು ಪ್ರಧಾನಿಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನ ಭವನದಿಂದ ಈ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದು, ದೇಶದ 200 ಸ್ಥಳಗಳನ್ನು ಈ ಕಾರ್ಯಕ್ರಮದ ನೇರ ಪ್ರಸಾರ ಇರಲಿದೆ. ಅಂದು ಈ ಕಾರ್ಯಕ್ರಮ ರಾಯಚೂರು ನಗರದ ನವೋದಯ ಇನ್ಸೂಟ್ ಆಫ್ ಟೆಕ್ನಾಲಜಿ ನಲ್ಲಿ ಈ ಕಾರ್ಯಕ್ರಮದ ನೇರ ಪ್ರಸಾರವಿದ್ದು, ಇದರಲ್ಲಿ ಜನಪ್ರತಿನಿಧಿಗಳು ಹಾಗೂ ಈ ಯೋಜನೆಯ ಫಲಾನುಭವಿಗಳು ಸೇರಿದಂತೆ ಇತರರು ಭಾಗಿಯಾಗಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪ್ರಾದೇಶಿಕ ಸಹಾಯಕ ಭವಿಷ್ಯ ನಿಧಿ ಕಚೇರಿಯ ಲೆಕ್ಕಾಧಿಕಾರಿ ಪಿ.ರಾಘವೇಂದ್ರ, ಶರಣಬಸವ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಸುರೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *