ಪಟ್ಟಣವು ಸೇರಿದಂತೆ ತಾಲೂಕಿನಾದ್ಯಂತ ರಸಗೊಬ್ಬರ ಮಾರಾಟಗಾರರು ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ರೈತರನ್ನು ವಂಚಿಸುತ್ತಿದ್ದಾರೆ. ಅಲ್ಲದೇ ರೈತರಿಗೆ ರಸಗೊಬ್ಬರಗಳ ಜೊತೆ ಕಡ್ಡಾಯವಾಗಿ ಇತರೆ ಉತ್ಪನ್ನಗಳನ್ನು ಖರೀದಿಸುವಂತೆ ತಾಕೀತು ಮಾಡಿ,ಕಳಪೆ ಗುಣಮಟ್ಟದ ಬೀಜಗಳನ್ನು ಮಾರಾಟ ಮಾಡುತ್ತಿರುವ ಗೊಬ್ಬರ ಅಂಗಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಜಯ ಕರ್ನಾಟಕ ರಕ್ಷಣಾ ಸೇನೆಯ ತಾಲೂಕ ಅಧ್ಯಕ್ಷ ಹನುಮಂತ ನಾಯಕ್ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು.

ಪ್ರಸ್ತುತ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭವಾಗಿರುವ ಸಂದರ್ಭದಲ್ಲಿ ರೈತರು ಗೊಬ್ಬರ ಮತ್ತು ಬೀಜಗಳಿಗಾಗಿ ಖಾಸಗಿ ರಸಗೊಬ್ಬರ ಅಂಗಡಿಗಳನ್ನು ಅವಲಂಬಿಸಿದ್ದಾರೆ. ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡುಕೆಲ ವ್ಯಾಪಾರಿಗಳು ಅಕ್ರಮ ಲಾಭ ಗಳಿಸುತ್ತಿದ್ದು, ಇದರಿಂದ ರೈತರಿಗೆ ಆರ್ಥಿಕ ನಷ್ಟವಾಗುವುದರ ಜೊತೆಗೆ ಕಳಪೆ ಬೀಜದಿಂದ ಗುರುಗುಂಟ , ಆನೆಹೊಸೂರು ಭಾಗದಲ್ಲಿ ಬೀತನೆ ಮಾಡಿದ ಬೀಜಗಳು ಮೊಳಕೆಯೊಡೆದಿಲ್ಲ ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ. ಅಲ್ಲದೇ ಬೀತನೆ ಬೀಜ ಹಾಗೂ ರಸಗೊಬ್ಬರ ಮಾರಾಟಕ್ಕೆ ಬಿಲ್ ನೀಡದೇ ಬಿಳಿ ಚೀಟಿ ವ್ಯವಹಾರ ಮಾಡಿ ರೈತರಿಗೆ ಹಾಗೂ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿ ಹಾಗೂ ನಿಗದಿತ ದರಗಳನ್ನು ಉಲ್ಲಂಘಿಸಿ ದುಪಟ್ಟು ದರಕ್ಕೆ ಗೊಬ್ಬರ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕೃಷಿ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಿ ದಾಳಿ ನಡೆಸಿ ಪರಿಶೀಲಿಸಬೇಕು.
ರೈತರ ಹಿತದೃಷ್ಟಿಯಿಂದ ಕೂಡಲೇ ಆಕ್ರಮವಾಗಿ ರಸಗೊಬ್ಬರಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಹಾಗೂ ಕಳಪೆ ಬಿತ್ತನೆ ಬೀಜಗಳನ್ನು ಮಾರಾಟ ಮಾಡುತ್ತಿರುವ ಅಂಗಡಿಗಳ ಪರವಾನಗಿಯನ್ನು (ಲೈಸೆನ್ಸ್) ರದ್ದುಪಡಿಸಿ ಕಠಿಣ ಶಿಕ್ಷೆ ವಿಧಿಸಬೇಕು.
ಒಂದು ವೇಳೆ ನಮ್ಮ ಮನವಿಗೆ ಸ್ಪಧಿಸದೇ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ, ರೈತರೊಂದಿಗೆ ಸಹಾಯಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಚ್ಚರಿಸಿದರು . ಈ ಸಂದರ್ಭದಲ್ಲಿ ನಿಂಗಪ್ಪ ರಾಮಲೂಟ ಪ್ರಧಾನ ಕಾರ್ಯದರ್ಶಿ , ಪ್ರಕಾಶ್ ಕುರಿ , ದುರುಗಪ್ಪ , ಅಮರೇಗೌಡ , ಹನುಮಂತ , ಮಲ್ಲೇಶ , ಪ್ರವೀಣ್ ಕುಮಾರ್ , ಮಲ್ಲೇಶ್ ನಾಯಕ , ಮೋಹಿನುದ್ದಿನ್ , ಆದಪ್ಪ ನಾಯಕ್ , ಶೇಷವಲ್ಲಿ , ಶಿವು ಆದಪ್ಪ ನಾಯಕ್ ,ರಾಮಪ್ಪ ನಾಯಕ್ , ಎಸ್ ಕುಮಾರ್ , ಅಮರೇಶ್ , ಅರುಣ್ ಕುಮಾರ್ , ವೆಂಕಟೇಶ್ ಸೇರಿದಂತೆ ಇತರರು ಇದ್ದರು .

Leave a Reply

Your email address will not be published. Required fields are marked *