ರಾಯಚೂರು -: ಇಲ್ಲಿನ ಕೇಂದ್ರ ಬಸ್ ನಿಲ್ದಾಣ ಸಮೀಪದ ಏಕಶಿಲಾ ಬಂಡೆ ಶಾಸನಕ್ಕೆ ರಕ್ಷಣೆ ಇಲ್ಲದ ಕಾರಣ ಬಂಡೆ ಕಲ್ಲಿನ ಪದರಗಳು ಕಳಚಿ ಬೀಳುತ್ತಿವೆ. ರಾಜ್ಯ ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿರ್ಲಕ್ಷ್ಯದ ಕಾರಣ ಏಕಶಿಲೆಯಲ್ಲಿನ ಶಾಸನ ಹಾಳಾಗಿ ಕಾಲಗರ್ಭ ಸೇರಲಾರಂಭಿಸಿದೆ.
ತಹಶೀಲ್ದಾರ್ ಕಚೇರಿ ರಸ್ತೆ ಪಕ್ಕ ಏಕಶಿಲಾ ಶಾಸನದ ಗೋಡೆ ಬದಿಯಲ್ಲಿ ಅನೇಕ ಅಂಗಡಿಗಳಿವೆ. ಬಂಡೆ ಶಾಸನದ ಐದು ಅಡಿ ಅಂತರದಲ್ಲೇ ಇಂದಿರಾ ಕ್ಯಾಂಟೀನ್ ಸಹ ನಿರ್ಮಿಸಲಾಗಿದೆ. ಪುರಾತತ್ವ ಇಲಾಖೆಯ ನಿಯಮ ಹಾಗೂ ಕಾನೂನುಗಳು ಗೊತ್ತಿದ್ದರೂ ಬೇರೆ ಇಲಾಖೆಗಳು ಸ್ಮಾರಕದ ಬಳಿಯೇ ಕಟ್ಟಡ ನಿರ್ಮಿಸಿಕೊಂಡಿವೆ. ಅಧಿಕಾರಿಗಳ ಮೌನ ಸಮ್ಮತಿ ಹಲವು ಅನಾಹುತಗಳಿಗೆ ದಾರಿ ಮಾಡಿಕೊಟ್ಟಿದೆ.
ಪುರಾತತ್ವ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯಿಂದ ಒಂದು ಫಲಕವನ್ನೂ ಇಲ್ಲಿ ಅಳವಡಿಸಿಲ್ಲ. ಕೋಟೆ ಅಧ್ಯಯನ ಸಮಿತಿಯೇ ಬಂಡೆ ಶಾಸನದಲ್ಲಿ ಬರೆದಿರುವ ಅಂಶಗಳನ್ನು ಫಲಕದಲ್ಲಿ ಮುದ್ರಿಸಿ ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ಅಳವಡಿಸಿದೆ.
‘ಪುರಾತತ್ವ ಇಲಾಖೆಯ ಅಧಿಕಾರಿಗಳು ಜವಾಬ್ದಾರಿ ವಹಿಸಿ ಕಾರ್ಯನಿರ್ವಹಿಸುತ್ತಿಲ್ಲ. ಇಲಾಖೆಯಲ್ಲಿ ನಿಪುಣ ಸಿಬ್ಬಂದಿಯ ಕೊರತೆ ಇದೆ. ಹೀಗಾಗಿ ನಗರದಲ್ಲಿನ ಸ್ಮಾರಕಗಳು ನಮ್ಮ ಕಣ್ಣೆದುರೇ ಹಾಳಾಗುತ್ತಿವೆ’ ಎಂದು ರಾಯಚೂರು ಕೋಟೆ ಅಧ್ಯಯನ ಸಮಿತಿ ಗೌರವಾಧ್ಯಕ್ಷ ಜಯಣ್ಣ ಅಸಮಾಧಾನ ವ್ಯಕ್ತಪಡಿಸುತ್ತಾರೆ.
‘ಅಪರೂಪದ ಬಂಡೆ ಶಾಸನ ಉಳಿಸಿಕೊಳ್ಳಲು ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಮಹಾನಗರ ಪಾಲಿಕೆ ಅಧಿಕಾರಿಗಳು ಮುಂದಾಗಬೇಕು. ಶಾಸನಗಳ ಸಂರಕ್ಷಣೆಗೆ ಒತ್ತು ಕೊಡಬೇಕು’ ಎಂದು ರಾಯಚೂರು ಕೋಟೆ ಅಧ್ಯಯನ ಸಮಿತಿ ಕಾರ್ಯದರ್ಶಿ ಸೈಯದ್ ಹಫೀಜುಲ್ಲಾ ಮನವಿ ಮಾಡುತ್ತಾರೆ. ‘ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಮಿತ್ರ ಯೋಜನೆ ಅಡಿ ಕಾವಲುಗಾರರನ್ನು ಕೊಟ್ಟರೂ ಅವರನ್ನು ಕೋಟೆ ರಕ್ಷಣೆಗೆ ನಿಯೋಜಿಸಲಾಗಿದೆ. ಸಿಬ್ಬಂದಿ ಕೊರತೆ ಇರುವ ಕಾರಣ ಏನೂ ಮಾಡದಂತ ಸ್ಥಿತಿಯಲ್ಲಿದ್ದೇವೆ’ ಎಂದು ರಾಜ್ಯ ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕ್ಯುರೇಟರ್ ಶಿವಪ್ರಕಾಶ ಹೇಳಿದರು.
ಏಕಶಿಲಾ ಬಂಡೆ ಶಾಸನದ ವಿಶೇಷತೆಗಳು -: ರಾಯಚೂರು ನಗರದ ಬಸ್ ನಿಲ್ದಾಣ ಸಮೀಪ ಕೋಟೆಯ ಗೋಡೆಯಲ್ಲಿರುವ ದೊಡ್ಡ ಬಂಡೆಯ ಮೇಲಿನ ಶಾಸನ ಐತಿಹಾಸಿಕ ಕಾಕತೀಯರ ಕಾಲದ ಏಕಶಿಲಾ ಶಾಸನವು 42 ಉದ್ದ ಹಾಗೂ 3 ಅಡಿ ಅಗಲದ ಬೃಹತ್ ಕಲ್ಲಿನಲ್ಲಿದೆ. ಕ್ರಿ.ಶ. 1294ರ ನವೆಂಬರ್ 23ರಂದು ರಾಣಿ ರುದ್ರಮ್ಮದೇವಿಯವರ ಮಂತ್ರಿ ಗೋರೆ ಗಂಗಯ ರೆಡ್ಡಿವರ ಆಜ್ಞೆಯ ಮೇರೆಗೆ ಇದನ್ನು ಕೆತ್ತಲಾಗಿದೆ.
ಭಾಷೆ ಮತ್ತು ಲಿಪಿ: ಈ ಶಾಸನವು ಕನ್ನಡ ಲಿಪಿಯಲ್ಲಿದ್ದರೂ, ಬಳಸಲಾಗಿರುವ ಭಾಷೆ ತೆಲುಗಾಗಿದೆ. ಆಶಯ: “ಸರ್ವ ರಾಷ್ಟ್ರ ಸಮಸ್ತ ಪ್ರಜಾ ರಕ್ಷಣಾರ್ಥ” (ಎಲ್ಲಾ ರಾಷ್ಟ್ರಗಳ ಮತ್ತು ಜನರ ರಕ್ಷಣೆಗಾಗಿ) ಎಂಬ ಘೋಷಣೆಯೊಂದಿಗೆ ಕೋಟೆಯ ನಿರ್ಮಾಣವನ್ನು ಇದು ಸಾರುತ್ತದೆ. ಇದು ಕಾಕತೀಯರ ಕಾಲದ ಹೆಗ್ಗುರುತಾಗಿದ್ದು, ಅತ್ಯಂತ ದೀರ್ಘವಾದ ಏಕಶಿಲಾ ಶಾಸನವಾಗಿದೆ.
ಬಂಡೆ ಶಾಸನದ ಬದಿಯಲ್ಲಿ ಈ ಬೃಹತ್ ಕಲ್ಲನ್ನು ಎತ್ತಿನ ಗಾಡಿಗಳು ಮತ್ತು ಎತ್ತುಗಳನ್ನು ಬಳಸಿ ಗಣಿಯಿಂದ ಕೋಟೆಯವರೆಗೆ ಹೇಗೆ ತರಲಾಯಿತು ಎನ್ನುವುದನ್ನು ಬಿಂಬಿಸುವ ಕೆತ್ತನೆಗಳು ಸಹ ಕಾಣಸಿಗುತ್ತವೆ. ಕೋಟೆ ಪ್ರದೇಶದಲ್ಲಿ ಪರ್ಷಿಯನ್, ಉರ್ದು ಮತ್ತು ಅರೇಬಿಕ್ ಭಾಷೆಗಳಲ್ಲಿ ಬರೆಯಲಾದ ಕಲ್ಲಿನ ಶಾಸನಗಳೂ ಇವೆ.

