ಮುದ್ದೇಬಿಹಾಳ: ಮತಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿಯ ಮುಲಾಜು ತೋರಿಸುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಸಿ.ಎಸ್. ನಾಡಗೌಡ ಸ್ಪಷ್ಟಪಡಿಸಿದರು. ತಾವು ಯಾರಿಂದಲೂ ಕಮಿಷನ್ ಪಡೆದಿಲ್ಲ ಎಂದು ಹೇಳಿದ ಅವರು, “ನಾನು ಕಮಿಷನ್ ಗಿರಾಕಿ ಅಲ್ಲ. ಯಾರಾದರೂ ನನಗೆ ಕಮಿಷನ್ ನೀಡಿದ್ದರೆ ನನ್ನ ಎದುರು ಬಂದು ದೇವರ ಮೇಲೆ ಆಣೆ ಮಾಡಿ ಹೇಳಲಿ” ಎಂದು ಸವಾಲು ಹಾಕಿದರು.
ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುದ್ದೇಬಿಹಾಳ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದು, ಜಿಲ್ಲೆಯಲ್ಲಿಯೇ ಬಬಲೇಶ್ವರ ಕ್ಷೇತ್ರವನ್ನು ಹೊರತುಪಡಿಸಿದರೆ ಹೆಚ್ಚಿನ ಅನುದಾನ ಪಡೆದ ಕ್ಷೇತ್ರ ಮುದ್ದೇಬಿಹಾಳವಾಗಿದೆ ಎಂದು ಹೇಳಿದರು.
ಕೆಲವು ಗುತ್ತಿಗೆದಾರರು ಅಭಿವೃದ್ಧಿಗಿಂತ ರಾಜಕಾರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕ್ರಿಕೆಟ್ ಪಂದ್ಯಾವಳಿ ಹಾಗೂ ಗಣೇಶೋತ್ಸವಗಳಿಗೆ ಹಣ ವೆಚ್ಚ ಮಾಡುವ ಬದಲು ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದಿಂದ ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು.
“ಒಕ್ಕಲಿಗನಾಗಲು ಏನು ಬೇಕು ಎಂಬುದೇ ಕೆಲವರಿಗೆ ತಿಳಿದಿಲ್ಲ. ಕೇವಲ ಹಸಿರು ಟವೆಲ್ ಹಾಕಿಕೊಂಡು ರಾಜಕಾರಣ ಮಾಡುತ್ತಿದ್ದಾರೆ” ಎಂದು ಟೀಕಿಸಿದ ಅವರು, ನಾಗರಬೆಟ್ಟ ಏತ ನೀರಾವರಿ ಯೋಜನೆ ಜಾರಿಯಾದ ಸಂದರ್ಭದಲ್ಲಿ ಇಂದು ರೈತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಹಲವರು ರಾಜಕೀಯ ಕ್ಷೇತ್ರದಲ್ಲೇ ಇರಲಿಲ್ಲ ಎಂದು ವ್ಯಂಗ್ಯವಾಡಿದರು.
ಜನರ ಋಣ ನಮ್ಮ ಮೇಲಿದೆ. ಸ್ಥಳೀಯ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನೇ ಆಧಾರವಾಗಿಟ್ಟುಕೊಂಡು ರಾಜಕಾರಣ ಮಾಡಿದ್ದೇನೆ ಎಂದು ಹೇಳಿದ ಅವರು, ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಸೂಚಿಸಿದರು. ಅರ್ಧಮರ್ಧ ಕಾಮಗಾರಿ ನಡೆಸುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಅಗತ್ಯವಿದೆ ಎಂದರು.
“ಯಾವೊಬ್ಬ ಗುತ್ತಿಗೆದಾರನ ಸಹಾಯದಿಂದ ನಾನು ಚುನಾವಣೆಯಲ್ಲಿ ಗೆದ್ದಿಲ್ಲ. ಗುತ್ತಿಗೆದಾರರ ಅವಶ್ಯಕತೆ ನಮಗಿಲ್ಲ” ಎಂದು ಸ್ಪಷ್ಟಪಡಿಸಿದ ಅವರು, ಮಾಧ್ಯಮಗಳು ವರದಿ ಮಾಡುವಾಗ ವಿಷಯದ ಸೂಕ್ಷ್ಮತೆಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ತಪ್ಪು ಮಾಡಿದವರ ವಿರುದ್ಧ ನಿರ್ಭಯವಾಗಿ ವರದಿ ಮಾಡಲಿ, ಆದರೆ ಪ್ರತಿಯೊಂದು ವಿಚಾರಕ್ಕೂ ಶಾಸಕರನ್ನು ಎಳೆದು ತರುವುದು ನ್ಯಾಯವೇ ಎಂಬ ಪ್ರಶ್ನೆಯನ್ನು ಎತ್ತಿದರು.
ಈ ವೇಳೆ ಸಚಿವ ಸಂಪುಟ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ನಾಡಗೌಡ, ಪಕ್ಷದ ನಾಯಕತ್ವ ಅವಕಾಶ ನೀಡಿದರೆ ಸಚಿವರಾಗಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಆಸೆ ಹೊಂದಿದ್ದೇನೆ ಎಂದು ತಿಳಿಸಿದರು.

