ತಾಳಿಕೋಟಿ: ನಗರದ ಹುಣಸಗಿ ರಸ್ತೆಯಲ್ಲಿರುವ ಲೋಟಸ್ ಕಾಲೇಜ್ ಆಫ್ ಫಾರ್ಮಸಿ, ತಾಳಿಕೋಟಿಯ ದ್ವಿತೀಯ ವರ್ಷದ ಡಿ-ಫಾರ್ಮಸಿ (D.Pharmacy) ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಸಂಸ್ಥೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ಕಾಲೇಜಿನ ಶೈಕ್ಷಣಿಕ ಗುಣಮಟ್ಟವನ್ನು ಸಾಬೀತುಪಡಿಸಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಶ್ರಮವಹಿಸಿ ಈ ಸಾಧನೆಯನ್ನು ಮಾಡಿದ್ದಾರೆ.

ಪರೀಕ್ಷೆಯಲ್ಲಿ ಸಿದ್ಲಿಂಗೇಶ್ ಯರನಾಳ ಅವರು 835 ಅಂಕಗಳು (75.9%) ಪಡೆದು ಪ್ರಥಮ ಸ್ಥಾನ ಗಳಿಸಿದ್ದು, ಮೊಹಮ್ಮದ್ ಸಾಬೀರ್ ಯಕೀನ್ 834 ಅಂಕಗಳು (75.8%) ಪಡೆದು ದ್ವಿತೀಯ ಸ್ಥಾನ ಹಾಗೂ ಶರ್ಮುನ್ನಿಸಾ ಖಲೀಫಾ 829 ಅಂಕಗಳು (75.3%) ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ.

ಇದೇ ರೀತಿ ಖುತಿಜಾ ತುಲ್ ಕುಬ್ರಾ 823 ಅಂಕಗಳು (74.8%) ಪಡೆದು ನಾಲ್ಕನೇ ಸ್ಥಾನ, ಸನಿಯಾಫರ್ಹೀನ್ ಖಲೀಫಾ 808 ಅಂಕಗಳು (73.4%) ಪಡೆದು ಐದನೇ ಸ್ಥಾನ ಹಾಗೂ ರವಿಕುಮಾರ್ 788 ಅಂಕಗಳು (71.6%) ಪಡೆದು ಆರನೇ ಸ್ಥಾನ ಗಳಿಸಿ ಕಾಲೇಜಿಗೆ ಹೆಮ್ಮೆ ತಂದಿದ್ದಾರೆ.

ಈ ಸಾಧನೆಯ ಹಿನ್ನೆಲೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಅವರ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದ್ದಾರೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಪೋಷಕರ ಸಹಕಾರ ಮತ್ತು ಶಿಕ್ಷಕರ ಮಾರ್ಗದರ್ಶನದ ಫಲವಾಗಿ ಈ ಯಶಸ್ಸು ಸಾಧ್ಯವಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಮುಜಾಹಿದ್ ನಮಾಜಕಟ್ಟಿ ತಿಳಿಸಿದ್ದಾರೆ.

ಕಾಲೇಜು ಕಳೆದ ಹಲವು ವರ್ಷಗಳಿಂದ ಗುಣಮಟ್ಟದ ಔಷಧ ಶಿಕ್ಷಣವನ್ನು ನೀಡುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯ ಜೊತೆಗೆ ವ್ಯಕ್ತಿತ್ವ ವಿಕಸನ, ಆರೋಗ್ಯ ಜಾಗೃತಿ ಹಾಗೂ ಸಾಮಾಜಿಕ ಜವಾಬ್ದಾರಿಗಳ ಕುರಿತ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ. ಈ ಸಾಧನೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಫಲಿತಾಂಶಗಳಿಗೆ ಪ್ರೇರಣೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸಾಧನೆಗೈದ ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜು ಕುಟುಂಬದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದ್ದು, ಮುಂದಿನ ಶೈಕ್ಷಣಿಕ ಜೀವನದಲ್ಲಿಯೂ ಇದೇ ರೀತಿಯ ಯಶಸ್ಸು ಸಾಧಿಸಲಿ ಎಂದು ಸಂಸ್ಥೆಯ ಅಧ್ಯಕ್ಷರಾದ ಇರ್ಫಾನ್.ಕೆ ಹಾರೈಸಿದ್ದಾರೆ.

Leave a Reply

Your email address will not be published. Required fields are marked *