ರಾಯಚೂರು ಜೂನ್ 10 (ಕರ್ನಾಟಕ ವಾರ್ತೆ): ರಾಯಚೂರು ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಕಾನೂನಾತ್ಮಕವಾಗಿ ವಿಧಿಸಲಾಗಿರುವ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿ, ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸಾರ್ವಜನಿಕರಿಗೆ ಇದೇ ಜೂನ್ 21 ರಿಂದ ಜುಲೈ 10ರವರೆಗೆ ಸುವರ್ಣಾವಕಾಶ ಕಲ್ಪಿಸಲಾಗಿದೆ ಎಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಗೌರವಾನ್ವಿತ ಸಿದ್ದರಾಮಪ್ಪ ಕಲ್ಯಾಣರಾವ್ ಅವರು ಹೇಳಿದರು.

ಜೂನ್ 10ರ ಬುಧವಾರ ದಂದು ನಗರದ ಜಿಲ್ಲಾ ನ್ಯಾಯಾಲಯದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಂಚಾರ ನಿಯಮ ಉಲ್ಲಂಘನೆ ಅಂತಹ ಅಪರಾಧಗಳು ಸಂಭವಿಸುತ್ತವೆ. ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ದೊಡ್ಡದು ಮಾಡುವ ಬದಲು, ಸಾರ್ವಜನಿಕರಿಗೆ ಸುಲಭವಾಗಿ ಮುಕ್ತಾಯಗೊಳಿಸಿಕೊಳ್ಳಲು ಕರ್ನಾಟಕ ಸರ್ಕಾರದ ಜೊತೆ ಚರ್ಚಿಸಿ ಈ ರಿಯಾಯಿತಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಮೇ 2026 ಕ್ಕಿಂತ ಮೊದಲು ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ಗಳಲ್ಲಿ ದಾಖಲಾಗಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತದಲ್ಲಿ ಹಾಗೂ ಸಾರಿಗೆ ಇಲಾಖೆಯಲ್ಲಿ 1991 ರಿಂದ 2022 ರವರೆಗೆ ದಾಖಲಾಗಿರುವ ಪ್ರಕರಣಗಳಿಗೆ ಶೇ.50ರಷ್ಟು ರಿಯಾಯಿತಿ ಅನ್ವಯವಾಗಲಿದ್ದು, ಸಾರ್ವಜನಿಕರು ನಿಗದಿತ ದಂಡದ ಅರ್ಧದಷ್ಟು ಮೊತ್ತವನ್ನು ಪಾವತಿಸಿ ತಮ್ಮ ಪ್ರಕರಣಗಳನ್ನು ಮುಕ್ತಾಯಗೊಳಿಸಿಕೊಳ್ಳಬಹುದು ಎಂದರು.

6070 ಬಾಕಿ ಪ್ರಕರಣ: ರಾಯಚೂರಿನ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ 2011-12ರಲ್ಲಿ 4 ಪ್ರಕರಣ, 2012-13ರಲ್ಲಿ 07 ಪ್ರಕರಣ, 2013-14ರಲ್ಲಿ 21ಪ್ರಕರಣ, 2014-15ರಲ್ಲಿ 34 ಪ್ರಕರಣ, 2015-16ರಲ್ಲಿ 21ಪ್ರಕರಣ, 2016-17ರಲ್ಲಿ 22 ಪ್ರಕರಣ, 2017-18ರಲ್ಲಿ 54 ಪ್ರಕರಣ, 2018-19ರಲ್ಲಿ 80 ಪ್ರಕರಣ, 2019-20ರಲ್ಲಿ 107 ಪ್ರಕರಣ, 2020-21ರಲ್ಲಿ 2946 ಪ್ರಕರಣ, 2021-22ರಲ್ಲಿ 2774 ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 6070 ಪ್ರಕರಣಗಳು ಸಾರಿಗೆ ಇಲಾಖೆಯಲ್ಲಿ ಬಾಕಿ ಇವೆ ಎಂದರು.

ಇದೇ ಸಂದರ್ಭದಲ್ಲಿ ರಾಯಚೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಈರಣ್ಣ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಜಿ.ಸುರೇಶ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *