ತಾಳಿಕೋಟಿ: ಪಟ್ಟಣದ ಹತ್ತಿರ ಹರಿದು ಹೋಗುವ ಡೋಣಿ ನದಿಗೆ ಹಾಗೂ ಮೂಕಿಹಾಳ ಗ್ರಾಮದ ಹತ್ತಿರ ಸೋಗಲಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆಗಳ ಪ್ರಗತಿ ಹಂತದ ಕಾಮಗಾರಿಯನ್ನು ಕೆ ಎಸ್ ಡಿ ಎಲ್ ಅಧ್ಯಕ್ಷ, ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾದ ಸಿ.ಎಸ್.ನಾಡಗೌಡ ಅಪ್ಪಾಜಿಯವರು ಪರಿಶೀಲಿಸಿದರು. ಮಂಗಳವಾರ ಕಾಮಗಾರಿ ನಡೆಯುತ್ತಿರುವ ಎರಡೂ ಸೇತುವೆಗಳ ಸ್ಥಳಗಳಿಗೆ ಭೇಟಿ ನೀಡಿದ ಶಾಸಕರು ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆಯ ಎಇಇ ರೆಡ್ಡಿ ಅವರಿಂದ ಕಾಮಗಾರಿಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರು. ಕಾಮಗಾರಿಗೆ ಬಳಸುತ್ತಿರುವ ಮರಳನ್ನು ಸ್ವತಃ ಪರಿಶೀಲಿಸಿದರು. ಯಾವ ಕಾರಣಕ್ಕೂ ಕಾಮಗಾರಿಯ ಗುಣಮಟ್ಟ ಕೆಡದಂತೆ ನೋಡಿಕೊಳ್ಳಬೇಕೆಂದು ಸ್ಪಷ್ಟ ಸೂಚನೆ ನೀಡಿದರು. ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಮುಖ್ಯ ಸೇತುವೆ ಅಂದಾಜು 30 ಕೋಟಿಯದ್ದಾಗಿದೆ ಇದು ಪೂರ್ಣಗೊಳ್ಳಲು ಇನ್ನಷ್ಟು ಸಮಯಾ ವಕಾಶದ ಅಗತ್ಯವಿದೆ ಆದ್ದರಿಂದ ತಾಳಿಕೋಟಿಯಿಂದ ಹಡಗಿನಾಳ ಮಾರ್ಗದ ಸೋಗಲಿ ಹಳ್ಳದ ಹತ್ತಿರ ನಿರ್ಮಾಣಗೊಳ್ಳುತ್ತಿರುವ ಕೆಳ ಸೇತುವೆ ಮೇ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ
ಸೂಚನೆ ನೀಡಿದ್ದೇನೆ. ಈ ಸೇತುವೆ ಪೂರ್ಣಗೊಂಡರೆ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗುವುದಿಲ್ಲ ಅದನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಈ ಎರಡು ಸೇತುವೆಗಳ ಜೊತೆಗೆ ಹಿರೂರದಿಂದ ಗುತ್ತಿಹಾಳ ಗ್ರಾಮಕ್ಕೆ ಸಂಪರ್ಕ ನೀಡುವ ಸುಮಾರು 30 ಕೋಟಿಗಿಂತಲೂ ಹೆಚ್ಚು ಮೊತ್ತದ ಇನ್ನೊಂದು ಸೇತುವೆ ಕಾಮಗಾರಿಗೆ ಶೀಘ್ರದಲ್ಲಿಯೇ ಚಾಲನೆ ನೀಡಲಿದ್ದೇನೆ ಈ ಸೇತುವೆ ನಿರ್ಮಾಣದಿಂದ ಈ ಭಾಗದ ಗ್ರಾಮೀಣ ಜನರಿಗೆ ತುಂಬಾ ಅನುಕೂಲವಾಗಲಿದೆ ಎಂದ ಅವರು ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನವನ್ನು ತಂದು ಕೆಲಸ ಮಾಡುತ್ತಿದ್ದೇನೆ ಇದರಲ್ಲಿ ಕ್ಷೇತ್ರದ ಜನರ ಸಾಕಷ್ಟು ಸಹಕಾರ ನನ್ನೊಂದಿಗೆ ಇದೆ ಮುಂದೆಯೂ ಆ ಸಹಕಾರ ಇದೇ ರೀತಿಯಾಗಿರಲಿ ಎಂದು ನಾನು ಕೇಳಿಕೊಳ್ಳುತ್ತೇನೆ ಎಂದರು. ಈ ಸಮಯದಲ್ಲಿ ಮುಖಂಡರಾದ ಸಿದ್ದನಗೌಡ ಪಾಟೀಲ ನಾವದಗಿ,ಪ್ರಭುಗೌಡ ಮದರಕಲ್ಲ, ಸುರೇಶಧಣಿ ನಾಡಗೌಡ ಬಿಂಜಲಭಾವಿ, ಶರಣುಧಣಿ ದೇಶಮುಖ, ರಾಜುಗೌಡ ಮುದ್ದೇಬಿಹಾಳ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಸಂಗನಗೌಡ ಅಸ್ಕಿ, ಆರಿಫ್ ಹೊನ್ನುಟಗಿ, ಫಯಾಜ್ ಉತ್ನಾಳ, ಆಸಿಫ್ ಕೆಂಭಾವಿ, ಎಇಇ ಎ.ಬಿ.ರೆಡ್ಡಿ, ಶರಣಪ್ಪ ಕುಂಬಾರ, ಶಿವಪುತ್ರಪ್ಪ ಬಿಳೇಭಾವಿ, ಅಭಿಯಂತರ ವೀರೇಶ ಕುಂಬಾರ,ಮಾಲೂಬಾ ಜಾಧವ ಮತ್ತಿತರರು ಇದ್ದರು.

