ಜಾಲಹಳ್ಳಿ : ಗ್ರಾಮದ ಶ್ರೀ ಲಕ್ಷ್ಮಿ ರಂಗನಾಥ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವವು 02-೦4-2026 ಗುರುವಾರ ರಾತ್ರಿ ಸುಮಾರು 8:40ಕ್ಕೆ ಭಕ್ತಿ ಭಾವ ಹಾಗೂ ಅದ್ದೂರಿಯಿಂದ ಜರುಗಿತು. ಸಾವಿರಾರು ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು.
ಬೆಳಗ್ಗಿನಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ಭಕ್ತರು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ದೀರ್ಘ ದಂಡ ನಮಸ್ಕಾರ ಸಲ್ಲಿಸಿ ಭಕ್ತಿ ಪ್ರದರ್ಶಿಸಿದರು.
ಮಧ್ಯಾಹ್ನದಿಂದ ಬ್ರಹ್ಮರಥೋತ್ಸವದ ಅಂಗವಾಗಿ ವಿವಿಧ ಸಂಪ್ರದಾಯಗಳು ನೆರವೇರಿದವು. ಊರಿನ ರಾಜವಂಶಸ್ಥರು, ದೊರೆಗಳು, ವತಂದಾರರು, ಪೊಲೀಸ್ ಪಾಟೀಲ್, ಮಾಲಿ ಪಾಟೀಲ್ ಹಾಗೂ ಕುಲಕರ್ಣಿಯವರು ಆಂಜನೇಯ ದೇವಸ್ಥಾನದಲ್ಲಿ ಕಳಸ ಪೂಜೆ ನೆರವೇರಿಸಿ ಮೆರವಣಿಗೆಯ ಮೂಲಕ ರಥದತ್ತ ಕರೆದೊಯ್ದರು. ಬಳಿಕ ನಿಸ್ಸಾಣಿ ಮನೆತನದವರು ಕಳಸವನ್ನು ರಥದಲ್ಲಿ ಪ್ರತಿಷ್ಠಾಪಿಸಿದರು.
ನಂತರ ತಿಮ್ಮಪ್ಪ ದೇವಸ್ಥಾನದಲ್ಲಿ ಲಕ್ಷ್ಮಿ ಪೂಜೆ ನೆರವೇರಿಸಿ, ದೇವಿಯನ್ನು ಪಲ್ಲಕ್ಕಿಯಲ್ಲಿ ಕರೆದುಕೊಂಡು ಬಂದು ತೇರಿನ ಬಳಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರು ನೀರಿನ ಆಟ ಆಡಿ ಸಂಭ್ರಮಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಈ ನೀರಿನ ಆಟ ಜಾಲಹಳ್ಳಿಯ ರಥೋತ್ಸವದ ವಿಶೇಷ ಆಕರ್ಷಣೆಯಾಗಿದೆ.
ಸಂಜೆ ವೇಳೆಗೆ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಚಿಕ್ಕಲ್ ಮನೆತನದವರ ನೇತೃತ್ವದಲ್ಲಿ ರಥದ ಹಗ್ಗವನ್ನು ತರಲಾಗಿದ್ದು, ನಂತರ ಭಕ್ತರು ಹೊಸ ವಸ್ತ್ರ ಧರಿಸಿ ರಥೋತ್ಸವಕ್ಕೆ ಸಜ್ಜಾದರು.
ಊರಿನ ರಾಜವಂಶಸ್ಥರು ಮತ್ತು ವತಂದಾರರ ನೇತೃತ್ವದಲ್ಲಿ ರಸಬುತ್ತಿ ಮನೆಗೆ ತೆರಳಿ, ಅಲ್ಲಿಂದ ಶ್ರೀ ಲಕ್ಷ್ಮಿ ರಂಗನಾಥ ದೇವಸ್ಥಾನಕ್ಕೆ ಬಂದು ಪಲ್ಲಕ್ಕಿ ಸಮೇತ ಮೆರವಣಿಗೆ ಮೂಲಕ ತೇರಿನ ಬಳಿಗೆ ಬಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಗೋಕುಲ್ ಕೃಷ್ಣ ಆಚಾರಿ (ಅರಿಕೇರಿ) ಅವರ ನೇತೃತ್ವದಲ್ಲಿ ಪೂಜೆಗಳು ನಡೆದವು.
ಈ ಸಂದರ್ಭದಲ್ಲಿ ಪೂಜಾರಿಗಳಾದ ಸುರೇಶ್ ಪೂಜಾರಿ, ಗಂಗಾಧರ್ ಪೂಜಾರಿ, ಚಂದ್ರಹಾಸ್ ಪೂಜಾರಿ, ವೆಂಕಟೇಶ್ ಪೂಜಾರಿ ಹಾಗೂ ವರದಾಚಾರ್ಯರ ನೇತೃತ್ವದಲ್ಲಿ ಪೂಜೆಗಳು ನೆರವೇರಿದವು.
ರಾಜವಂಶಸ್ಥರಾದ ರಾಜರಂಗಪ್ಪ ನಾಯಕ್, ರಾಜ ರಾಮ್ ಭದ್ರಪ್ಪ ನಾಯಕ್, ರಾಜ ವಾಸುದೇವ ನಾಯಕ್, ರಂಗಪ್ಪ ದೊರೆ, ಕೋಪರೇಶ ರಾವ್ ದೇಸಾಯಿ ಹಾಗೂ ಶ್ರೀಧರ್ ದೇಸಾಯಿ, ಪೊಲೀಸ್ ಪಾಟೀಲ್, ಮಾಲಿ ಪಾಟೀಲ್, ಅವರ ಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಭಕ್ತರು ರಥವನ್ನು ಎಳೆಯುತ್ತ ಸಂಜೀವ ಮೂರ್ತಿ ಗುಡಿವರೆಗೆ ಕೊಂಡೊಯ್ದು ಪೂಜೆ ಸಲ್ಲಿಸಿ ಮತ್ತೆ ತೇರಿನ ಜಾಗದ ಬಳಿ ತರಲಾಯಿತು.
ನಂತರ ದೇವಸ್ಥಾನಕ್ಕೆ ತೆರಳಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಗುಡಿಯಲ್ಲಿ ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮ ನೆರವೇರುತ್ತದೆ.
ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು, ಊರಿನ ವತಂದಾರರು, ರಾಜವಂಶಸ್ಥರು, ದೇಸಾಯಿಯವರು, ಕುಲಕರ್ಣಿ, ಪೊಲೀಸ್ ಪಾಟೀಲ್, ಮಾಲಿಪಾಟೀಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿ ರಥೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
DYSP ದತ್ತಾತ್ರೇಯ ಕಾರ್ನಾಡ್ ಅವರ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಒದಗಿಸಿತು.


