ಮಸ್ಕಿ: ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ತಹಸೀಲ್ದಾರ್ ಮಂಜುನಾಥ ಭೋಗಾವತಿ ಅಧ್ಯಕ್ಷತೆಯಲ್ಲಿ ಜಗಜೀವನರಾಂ ಜಯಂತಿ ಆಚರಣೆ ಹಿನ್ನಲೆಯಲ್ಲಿ ಪೂರ್ವಭಾವಿ ಸಭೆ ಜರುಗಿತು.
ಸಭೆಯಲ್ಲಿ ತಹಸಿಲ್ದಾರ್ ಮಂಜುನಾಥ್ ಭೋಗಾವತಿ ಮಾತನಾಡಿ ಕಳೆದ ವರ್ಷದಂತೆ ಈ ವರ್ಷವೂ ಸಹ ಎಲ್ಲರ ಅಭಿಪ್ರಾಯವನ್ನು ಪಡೆದು ಜಯಂತಿಯನ್ನು ಆಚರಿಸಲು ತೀರ್ಮಾನಿಸೋಣ. ಏಪ್ರೀಲ್ ೧೪ ರಂದು ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿ ಹರಿಕಾರ ಜಗಜೀವನ್‌ರಾಂ ಅವರ ಜಯಂತಿಯನ್ನು ತಾಲೂಕಾಡಳಿತದಿಂದ ಅದ್ಧೂರಿಯಾಗಿ ಆಚರಿಸಲು ಏಪ್ರಿಲ್ 6 ರಂದು ಮತ್ತೊಮ್ಮೆ ಸಭೆ ಕರೆದು ಎಲ್ಲರೊಂದಿಗೆ ಚರ್ಚಿಸೋಣ ಎಂದರು. ಏ. 5ರಂದು ಡಾ. ಬಾಬು ಜಗಜೀವನರಾಂ ಜಯಂತಿಯನ್ನು ಸರ್ಕಾರದ ನಿಯಮದಂತೆ ಆಚರಣೆ ಮಾಡಲಾಗುವುದು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳು ಮುಖಂಡರು ಎರಡು ಜಯಂತಿಗಳನ್ನು ಒಟ್ಟಿಗೆ ಆಚರಣೆ ಮಾಡುವಂತೆ ಒತ್ತಾಯಿಸಿದರು. ನಂತರ ತಹಸೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ ಏ. ೫ ರಂದು ಡಾ.ಬಾಬು ಜಗಜೀವನರಾಂ ಅವರ ಜಯಂತಿ ಸರಳವಾಗಿ ಆಚರಿಸಿ ಮತ್ತೊಮ್ಮೆ ಎಲ್ಲರ ಅಭಿಪ್ರಾಯ ಪಡೆದು ಅದ್ದೂರಿಯಾಗಿ ಆಚರಿಸುವ ಕುರಿತು ತೀರ್ಮಾನಿಸೋಣ ಎಂದರು.
ಈ ಸಂದರ್ಭದಲ್ಲಿ ಲಿಂಗಸುಗೂರು ಸಮಾಜ ಕಲ್ಯಾಣ ಇಲಾಖೆ ತಾಲೂಕಾಧಿಕಾರಿ ರವೀಂದ್ರ ಉಪ್ಪರ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ, ದಲಿತ ಮುಖಂಡರಾದ ಸಿ.ದಾನಪ್ಪ ನಿಲೋಗಲ್, ದೊಡ್ಡಪ್ಪ ಮುರಾರಿ ನಾಗರತ್ನ ಕಟ್ಟಿಮನಿ, ಕಾಸಿಮಪ್ಪ ಮುರಾರಿ, ದುರ್ಗಾರಾಜ ವಟಗಲ್, ಮಲ್ಲಪ್ಪ ಗೋನಾಳ್, ಸಿದ್ದು ಮುರಾರಿ, ಕಿರಣ್ ಮುರಾರಿ, ಮಲ್ಲಿಕ್ ಮುರಾರಿ, ಪ್ರಶಾಂತ ದಾನಪ್ಪ, ಬಸವರಾಜ್ ಕೊಠರಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ತಹಸೀಲ್ ಕಛೇರಿ ಸಿಬ್ಬಂದಿಗಳಿದ್ದರು.

