ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಡೆದ ವಿವಿಧ ಮಹಾನಿಯರ ಜಯಂತಿಗಳ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಮಾತನಾಡಿ ತಾಲೂಕು ಆಡಳಿತ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಮುದಾಯಗಳ ಸಹಭಾಗಿತ್ವದಲ್ಲಿ ಏ.5 ರಂದು ಡಾ.ಬಾಬು ಜಗಜೀವನ್ ರಾಮ್ ಜಯಂತಿ ಹಾಗೂ ಏ.14 ರಂದು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿಯನ್ನು ಶಾಸಕ ಹಂಪಯ್ಯನಾಯಕರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಡಾ.ಬಾಬು ಜಗಜೀವನ್ ರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ತಹಶೀಲ್ದಾರ್ ಕಚೇರಿಯ ಆವರಣದಲ್ಲಿನ ವೇದಿಕೆಯವರೆಗೆ ವಿವಿಧ ಜನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಗುವುದು. ನಂತರ ವೇದಿಕೆಯಲ್ಲಿ ಡಾ.ಬಾಬು ಜಗಜೀವನ್ ರಾಮ್ ರವರ ಕುರಿತು ಹಿರಿಯ ವಕೀಲರಾದ ಯಲ್ಲಪ್ಪ ಬಾದರದಿನ್ನಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರ ಜೀವನ ಹಾಗೂ ಸಾಧನೆ ಕುರಿತು ತಾಯಪ್ಪ ಬಿ,ಹೋಸೂರು ರವರಿಂದ ಉಪನ್ಯಾಸ ಹಾಗೂ ಸಮುದಾಯಗಳ ಸಾಧಕರಿಗೆ ತಾಲೂಕಾಡಳಿತ ವತಿಯಿಂಸ ಸನ್ಮಾನ , ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಅಯೋಜಿಸಲಾಗಿದ್ದು ತಾಲೂಕು ಮಟ್ಟದಲ್ಲಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಏ.5 ರಂದು ಡಾ.ಬಾಬು ಜಗಜೀವನ್ ರಾಮ್ ಜಯಂತಿ ಹಾಗೂ ಏ.14 ರಂದು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಜಯಂತಿಯನ್ನು ಆಚರಿಸಿ ನಂತರ ತಾಲೂಕು ಆಡಳಿತ ವತಿಯಿಂದ ನಡೆಯುವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸೂಚಿಸಿದರು.
ದಲಿತ ಪರ ಹೋರಾಟಗಾರರಾದ ಪರಶುರಾಮ ಕುರ್ಡಿ ಮಾತನಾಡಿ ಮಾನ್ವಿಯಲ್ಲಿ ಇದುವರೆಗೂ ಕೂಡ ಡಾ.ಬಾಬು ಜಗಜೀವನ್ ರಾಮ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರ ಭವನ ನಿರ್ಮಾಣ ಮಾಡದೆ ಇರುವುದರಿಂದ ಸಾರ್ವಜನಿಕರಿಗೆ ತಮ್ಮ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ಅಗುತ್ತಿಲ್ಲ ಅದ್ದರಿಂದ ಕೂಡಲೆ ಭವನಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ದತ್ತಾತ್ರೇಯ ವಕೀಲರು ಮಾತನಾಡಿ ಚತುಷ್ಪಥ ರಸ್ತೆ ನಿರ್ಮಾಣ ಸಂಸ್ಥೆಯವರು ಮುಖ್ಯ ರಸ್ತೆಯಲ್ಲಿ ಬರುವ ಗ್ರಾಮಗಳಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತಗಳಲ್ಲಿನ ಭಾವಚಿತ್ರಗಳನ್ನು ಸ್ಥಳಾಂತರಿಸಿದು ಇದುವರೆಗೂ ಕೂಡ ಪುನಃ ಭಾವಚಿತ್ರಗಳನ್ನು ಅಳವಡಿಸಿಲ್ಲದೆ ಇರುವುದರಿಂದ ಜಯಂತಿಗಳನ್ನು ಆಚರಿಸುವುದಕ್ಕೆ ಸಾಧ್ಯವಾಗದೆ ಇರುವುದರಿಂದ ಕೂಡಲೆ ಭಾವಚಿತ್ರಗಳನ್ನು ಅಳವಡಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.
ಪೂರ್ವಭಾವಿ ಸಭೆಯಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಸೈರಾಬಾನು ಮಾತನಾಡಿದರು.
ತಾಲೂಕು ಪಂಚಾಯಿತಿ ಇ.ಓ. ಖಾಲಿದ್ ಅಹ್ಮದ್, ತಾ.ಅರೋಗ್ಯಧಿಕಾರಿ ಡಾ.ಶರಣಬಸವರಾಜು, ಪಿ.ಐ.ಸೋಮಶೇಖರ ಎಸ್. ಕೆಂಚರೆಡ್ಡಿ, ಪ.ಪಂಗಡ ಕಲ್ಯಾಣಾಧಿಕಾರಿ ಮಹಾಲಿಂಗಪ್ಪ ಇಂಗಳದಾಳ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಭಾಗಯ್ಯನಾಯಕ, ಹಿರಿಯ ದಲಿತ ಮುಖಂಡರಾದ ಹನುಮಂತಕೋಟೆ, ಶಿವರಾಜ ಉಮಳಿ ಹೊಸೂರು,ಬಸವರಾಜ ನಕ್ಕುಂದಿ, ಕಾಶಿನಾಥ ಕುರ್ಡಿ, ಬುಡ್ಡಪ್ಪನಾಯಕ, ಪಿ.ರವಿಕುಮಾರ,ಸುಂದರ್, ಸೇರಿದಂತೆ ಇನ್ನಿತರರು ಇದ್ದರು.

