ತಾಳಿಕೋಟಿ: ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಶ್ರೀ ವೃಷಭೇಂದ್ರೇಶ್ವರ ಮಠದ ಜಾತ್ರಾ ಮಹೋತ್ಸವವು ಭಕ್ತಿ ಹಾಗೂ ಧಾರ್ಮಿಕ ಸಂಭ್ರಮದ ವಾತಾವರಣದಲ್ಲಿ ಭಾನುವಾರ ವಿಜೃಂಭಣೆಯಿಂದ ನಡೆಯಿತು. ಜಾತ್ರಾ ಅಂಗವಾಗಿ ಆಯೋಜಿಸಿದ್ದ ಮಹಾಸಾತ್ವಿ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಉಪನ್ಯಾಸವನ್ನು ಆಲಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳಾದ ಡಾ. ಪ್ರಭುಗೌಡ ಲಿಂಗದಳ್ಳಿ ಅವರನ್ನು ಸಮಾಜಮುಖಿ ಸೇವೆಗಳು, ಜನಪರ ಕಾರ್ಯಗಳು ಹಾಗೂ ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸೇವೆಯನ್ನು ಗುರುತಿಸಿ ಜಾತ್ರಾ ಉತ್ಸವ ಸಮಿತಿ ವತಿಯಿಂದ ಶಾಲು ಹೊದಿಸಿ, ಫಲಕ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕೊಡೆಕಲ್ ದುರದುಂಡೇಶ್ವರ ಮಠದ ಪರಮಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಸಮಾಜದಲ್ಲಿ ಧಾರ್ಮಿಕ ಮೌಲ್ಯಗಳು ಹಾಗೂ ಸೇವಾಭಾವನೆ ಹೆಚ್ಚಬೇಕು ಎಂದು ಹೇಳಿದರು. ಕೊಡಗಾನೂರಿನ ಕುಮಾರ ದೇವರು ಮಾತನಾಡಿ ಜಾತ್ರೆಗಳು ಸಮಾಜದಲ್ಲಿ ಐಕ್ಯತೆ ಹಾಗೂ ಸಂಸ್ಕೃತಿ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಗ್ರಾಮದ ಗಣ್ಯರು, ಹಿರಿಯರು, ಯುವಕರು ಹಾಗೂ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು, ಭಜನೆ, ಪೂಜೆ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.

Leave a Reply

Your email address will not be published. Required fields are marked *