ಸಿಂಧನೂರು : ಸಿಂಧನೂರು ನಗರದಲ್ಲಿ ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಭಕ್ತಿಭಾವ ಹಾಗೂ ಧಾರ್ಮಿಕ ಉತ್ಸಾಹದ ನಡುವೆ ಭವ್ಯ ಮೆರವಣಿಗೆ ಆಯೋಜಿಸಲಾಯಿತು.
ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಈ ಮೆರವಣಿಗೆಯಲ್ಲಿ ಭಗವಾನ್ ಮಹಾವೀರರ ಭಾವಚಿತ್ರಗಳು, ಧಾರ್ಮಿಕ ಘೋಷಣೆಗಳು, ಭಜನೆಗಳು ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ಸಾರ್ವಜನಿಕರ ಗಮನ ಸೆಳೆದವು. ಜೈನ ಸಮುದಾಯದ ಸದಸ್ಯರು ಸೇರಿದಂತೆ ವಿವಿಧ ಧರ್ಮಗಳ ನಾಗರಿಕರು ಸಹ ಭಾಗವಹಿಸಿ ಧಾರ್ಮಿಕ ಸೌಹಾರ್ದತೆಯ ಸಂದೇಶವನ್ನು ಸಾರಿದರು.
ಮಹಿಳೆಯರು, ಯುವಕರು ಹಾಗೂ ಮಕ್ಕಳು ಭಕ್ತಿಭಾವದಿಂದ ಪಾಲ್ಗೊಂಡು ಮಹಾವೀರರ ಉಪದೇಶಗಳನ್ನು ಸ್ಮರಿಸಿದರು. ಕಾರ್ಯಕ್ರಮದ ವೇಳೆ ಸಮಾಜದಲ್ಲಿ ಶಾಂತಿ, ಅಹಿಂಸೆ, ಸಹನೆ ಹಾಗೂ ಸತ್ಯದ ಮಾರ್ಗದಲ್ಲಿ ನಡೆಯುವ ಮಹತ್ವವನ್ನು ಗಣ್ಯರು ತಿಳಿಸಿದರು.
ಮೆರವಣಿಗೆಯಲ್ಲಿ ಜನಪ್ರಿಯ ನಾಯಕರು ಹಾಗೂ (KOF) ರಾಜ್ಯಾಧ್ಯಕ್ಷರು, ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ವೆಂಕಟರಾವ್ ನಾಡಗೌಡರು, ಪಂಪನಗೌಡ ಬಾದರ್ಲಿ, ಸೋಮನಗೌಡ ಬಾದರ್ಲಿ, ಅಮರೇಶ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದರು.
ಭಗವಾನ್ ಮಹಾವೀರರು ಸಾರಿದ ಅಹಿಂಸೆ, ಸತ್ಯ, ತ್ಯಾಗ ಮತ್ತು ಮಾನವೀಯ ಮೌಲ್ಯಗಳು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಮತ್ತಷ್ಟು ಬಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.
ಮೆರವಣಿಗೆಯು ಶಾಂತಿಯುತವಾಗಿ ಸಾಗಿದ್ದು, ಸಾರ್ವಜನಿಕರು ಭಕ್ತಿ ಮತ್ತು ಸಂಭ್ರಮದಿಂದ ಭಾಗವಹಿಸಿ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು


