ಮಾನವಿ: ಶಿಕ್ಷಣವು ವ್ಯಕ್ತಿಯ ಜೀವನವನ್ನು ರೂಪಿಸುವ ಅತ್ಯಂತ ಶಕ್ತಿಶಾಲಿ ಸಾಧನವಾಗಿದ್ದು, ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಆಧಾರವಾಗಿದೆ ಎಂದು ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಜಿ. ಹಂಪಯ್ಯ ನಾಯಕ್ ಹೇಳಿದರು.
ಮಾನ್ವಿ ನಗರದಲ್ಲಿರುವ ಎಸ್‌ವಿಎಸ್ ಶಾಲೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿಕ್ಕ ಪ್ರಮಾಣದಲ್ಲಿ ಆರಂಭವಾದ ಎಸ್‌ವಿಎಸ್ ಶಾಲೆ ಇಂದು ಉತ್ತಮ ಮೂಲಸೌಕರ್ಯ, ಶಿಸ್ತುಬದ್ಧ ಶಿಕ್ಷಣ ವ್ಯವಸ್ಥೆ ಹಾಗೂ ಗುಣಮಟ್ಟದ ಬೋಧನೆಯ ಮೂಲಕ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು. ಶಾಲೆಯ ಆಡಳಿತ ಮಂಡಳಿಯ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಅಂಜನಾರೆಡ್ಡಿ ದಂಪತಿಗಳ ಸೇವೆಯನ್ನು ಅವರು ಶ್ಲಾಘಿಸಿದರು.
ಶಾಲೆಯ ಅಧ್ಯಕ್ಷರಾದ ತಿರುಪತಿ ರೆಡ್ಡಿ ಅವರು ರೈತ ಕುಟುಂಬದಿಂದ ಬೆಳೆದವರಾಗಿದ್ದು, ಅನೇಕ ಸವಾಲುಗಳನ್ನು ಎದುರಿಸಿ ಶಿಕ್ಷಣದ ಮಹತ್ವವನ್ನು ಅರಿತು ಸಂಸ್ಥೆಯನ್ನು ಯಶಸ್ವಿಯಾಗಿ ಬೆಳೆಸುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಮಾನವ ಜೀವನದಲ್ಲಿ ಸಂಪಾದಿಸಿದ ಆಸ್ತಿ-ಪಾಸ್ತಿಗಳು ಶಾಶ್ವತವಲ್ಲ; ಆದರೆ ಶಿಕ್ಷಣ ಎಂಬ ಅಮೂಲ್ಯ ಸಂಪತ್ತು ಮಾತ್ರ ವ್ಯಕ್ತಿಯೊಂದಿಗೆ ಸದಾ ಉಳಿಯುತ್ತದೆ. ಶಿಕ್ಷಣ ಪಡೆದ ಸಮಾಜವೇ ಪ್ರಗತಿಶೀಲ ಸಮಾಜವಾಗುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು ಎಂದು ತಿಳಿಸಿದರು.
ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಯೋಜನೆಯಡಿ ಈ ಭಾಗದ ಅಭಿವೃದ್ಧಿಗೆ ವಾರ್ಷಿಕವಾಗಿ ನೀಡಲಾಗುವ ₹5,000 ಕೋಟಿ ಅನುದಾನದಲ್ಲಿ ಶೇಕಡಾ 25 ರಷ್ಟು ಹಣವನ್ನು ಶಿಕ್ಷಣಾಭಿವೃದ್ಧಿಗೆ ಮೀಸಲಿಡಲಾಗಿದೆ. ಇದರ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿಯೂ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರದ ಸಂಕಲ್ಪವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾ ಪ್ರದರ್ಶನ ಹಾಗೂ ಶಿಕ್ಷಣ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಪಂಚ ಗ್ಯಾರಂಟಿ ಅಧ್ಯಕ್ಷ ಬಿ.ಕೆ. ಅಂಬರೇಶಪ್ಪ (ವಕೀಲರು), ಬಸವಶ್ರೀ ಇರಕಲಮಠ, ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ರಾಜ ಸುಭಾಷ್ ಚಂದ್ರ ನಾಯಕ್, ಸೈಯದ್ ಖಾಲಿದ್ ಖಾದ್ರಿ, ಗುಡದಿನ್ನಿ ಶರಣಯ್ಯ ನಾಯಕ್, ಕಾರ್ಯದರ್ಶಿ ರಾಜು ತಾಳಿಕೋಟೆ, ದೇವೇಂದ್ರಪ್ಪ ಬೊಮ್ಮನಾಳ ಹಾಗೂ ಮಾನ್ವಿ ತಾಲೂಕಿನ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು, ಪಾಲಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು

