ಹೆಗ್ಗಡೆರವರ ಸೇವಾಧಾರಿತ ಬದುಕು ದೇಶಕ್ಕೆ ಮಾದರಿ – ಯೋಜನಾಧಿಕಾರಿ
ಮಾನ್ವಿ : ಪಟ್ಟಣದ ನೆರಳು ಅನಾಥಾಶ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ರವರ 78ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಅನಾಥಾಶ್ರಮದ ವೃದ್ಧ ತಂದೆ–ತಾಯಂದಿರಿಗೆ ಊಟ ಹಾಗೂ ಹಣ್ಣು–ಹಂಪಲುಗಳ ಸೇವೆಯನ್ನು ಮಾಡಲಾಯಿತು.ಯೋಜನಾಧಿಕಾರಿ ಸುನಿತಾ ಪ್ರಭು ಮಾತಾನಾಡಿ, “ದೇಶದಾದ್ಯಂತ ಅಕ್ಷರಶಃ ಸೇವಾ ಪರಂಪರೆಯನ್ನು ಕಟ್ಟಿಕೊಟ್ಟವರು ವೀರೇಂದ್ರ ಹೆಗ್ಗಡೆ ಅವರು. ಅನ್ನದಾನ, ವಿದ್ಯಾದಾನ, ಆರೋಗ್ಯ ಸೇವೆ, ಸ್ವಚ್ಚತಾ ಅಭಿಯಾನ, ಗ್ರಾಮಾಭಿವೃದ್ಧಿ—ಯಾವ ಕ್ಷೇತ್ರ ನೋಡಿದರೂ ಮಾನವ ಸೇವೆಯೇ ಅವರ ಧ್ಯೇಯ. ‘ಸೇವೆಯೇ ಪರಮೋದ್ಧಾರ’ ಎಂಬ ಮಂತ್ರವನ್ನು ಕೇವಲ ಹೇಳದೇ, ಕರ್ಮದ ಮೂಲಕ ತಿಳಿಸಿದ್ದಾರೆ,” ಎಂದು ಹೇಳಿದರು.
ಸುರೇಶ್ ನಾಡಗೌಡ ಮಾತನಾಡಿ, “ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ನಡೆಯುತ್ತಿರುವ ಕೆಲವು ಅಪಸ್ವರ–ಸುಳ್ಳುಗಳ ಹಿಂದೆ ಸತ್ಯವಿಲ್ಲ. ದಶಕಗಳ ಕಾಲ ಸಾವಿರಾರು ಜನರ ಬದುಕು ಬದಲಿಸಿದ ಸೇವೆನ್ನು ನೋಡಿದರೆ ಯಾವ ಆರೋಪವೂ ನಿಲ್ಲುವುದಿಲ್ಲ. ಸಮಾಜಕ್ಕೆ ಮಾಡಿದ ಕೊಡುಗೆ ಎದುರಿಲ್ಲದಷ್ಟು ದೊಡ್ಡದು. ಜನರು ಈ ಸುಳ್ಳು ಸುದ್ದಿಗಳನ್ನು ನಂಬದೇ, ನಿಜವಾದ ಸೇವೆಯನ್ನು ಗುರುತಿಸಬೇಕು,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಶರಣಪ್ಪ ಮೇದಾ, ನೆರಳು ಅನಾಥಾಶ್ರಮದ ಚನ್ನಬಸವ ಸ್ವಾಮಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು ಹಾಗೂ ಸಮಾಜಸೇವಕರು ಉಪಸ್ಥಿತರಿದ್ದರು.

