ರಾಯಚೂರು ಮಾರ್ಚ 26 (ಕ.ವಾ.): ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಮಾನವ ಹಕ್ಕುಗಳ ಸಂರಕ್ಷಾಣಧಿಕಾರಿಗಳು. ಕಚೇರಿಗಳಿಗೆ ಯಾರೇ ದೂರು ಹೊತ್ತು ಬರಲಿ ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ.ಟಿ.ಶ್ಯಾಮ್ ಭಟ್ ಅವರು ಸಲಹೆ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾರ್ಚ 26ರಂದು ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಕರಣಗಳ ವಿಲೇವಾರಿ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ದೂರುಗಳ ವಿಚಾರಣೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಮಾರ್ಚ 25ರಂದು ರಾಯಚೂರು ನಗರದಲ್ಲಿ ವಸತಿ ನಿಲಯ, ಬಸ್ ನಿಲ್ದಾಣ, ಕಾರಾಗೃಹ ಸೇರಿದಂತೆ ವಿವಿಧೆಡೆ ಭೇಟಿ ನಡೆಸಿ ಆಯಾ ಕಡೆಗಳಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಲಾಗಿದೆ. ವಿದ್ಯಾರ್ಥಿನಿಯರು ವಸತಿ ನಿಲಯದ ಇಕ್ಕಟ್ಟಾದ ಕೋಣೆಯಲ್ಲಿ ವಾಸ್ತವ್ಯ ಮಾಡುತ್ತಿರುವುದು ಕಂಡು ಬಂದಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಕಟ್ಟಡದ ವ್ಯವಸ್ಥೆಗೆ ಕ್ರಮವಹಿಸಬೇಕು ಎಂದು ಅವರು ಸೂಚನೆ ನೀಡಿದರು.
ಬಸ್ ನಿಲ್ದಾಣದ ಭೇಟಿ ವೇಳೆ ಕೆಲ ಕಡೆ ಅಶುಚಿತ್ವ ಕಂಡು ಬಂದಿದೆ. ಇದು ಕೂಡಲೇ ಸರಿಯಾಗಬೇಕು. ರಾಯಚೂರು-ಮಾನವಿ ಮಧ್ಯೆ ಅಡ್ಡಾಡುವ ಬಸ್ಸಗಳು ಪ್ರಮುಖ ಹಳ್ಳಗಳಲ್ಲಿ ನಿಲುಗಡೆಯಾಗಬೇಕು. ರಾಯಚೂರು-ಲಿಂಗಸೂರು ಮಧ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಓಡಿಸಬೇಕು ಎನ್ನುವ ಸಾರ್ವಜನಿಕರ ಮನವಿಗೆ ಸ್ಪಂದನೆ ಸಿಗಬೇಕು ಎಂದು ಇದೆ ವೇಳೆ ಅಧ್ಯಕ್ಷರು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಬಸ್ ನಿಲ್ದಾಣದ ಆವರಣದಲ್ಲಿರುವ ಅಂಗಡಿಗಳು ಪ್ರಯಾಣಿಕರನ್ನು ಸುಲಿಯಬಾರದು. ಹೆಚ್ಚಿನ ಬೆಲೆ ನಿಗದಿಪಡಿಸಬಾರದು. ಅವಧಿ ಮುಗಿದ ಆಹಾರ ಪದಾರ್ಥ ಸೇರಿದಂತೆ ಯಾವುದೇ ವಸ್ತುಗಳನ್ನು ಮಾರಾಟ ಮಾಡಬಾರದು. ಈ ಬಗ್ಗೆ ಸಾರಿಗೆ ಅಧಿಕಾರಿಗಳು ಬಸ್ ನಿಲ್ದಾಣದ ಆವರಣದಲ್ಲಿರುವ ಅಂಗಡಿಗಳ ಮಾಲೀಕರಿಗೆ ಸುತ್ತೋಲೆ ಹೊರಡಿಸಿ ನಿರ್ದೇಶನ ನೀಡಬೇಕು ಎಂದು ಸೂಚನೆ ನೀಡಿದರು.
ಇದೆ ವೇಳೆ, ಆಯೋಗದ ನ್ಯಾಯಿಕ ಸದಸ್ಯರಾದ ಎಸ್.ಕೆ ವಂಟಿಗೋಡಿ ಅವರು ಮಾತನಾಡಿ, ವ್ಯಕ್ತಿಯೊಬ್ಬ ಸಂತೋಷದಿಂದ ಬಾಳಲು ಬೇಕಾದ ಮೂಲಭೂತ ಹಕ್ಕುಗಳೇ ಮಾನವ ಹಕ್ಕುಗಳು. ವ್ಯಕ್ತಿಯ ಜನ್ಮತಃದಿಂದ ಬರುವ ಹಕ್ಕುಗಳೇ ಮಾನವ ಹಕ್ಕುಗಳ ಎಂದು ತಿಳಿಯಬೇಕು.
ಜನಿಸಿದ ಪ್ರತಿಯೊಬ್ಬರಿಗೂ ಸಮಾಜದಲ್ಲಿ ಸಮಾನ ಅವಕಾಶ ಪಡೆದು ಬದುಕುವ ಹಕ್ಕಿದೆ. ಯಾರು ಸಹ ಶೋಷಣೆಗೆ ಒಳಗಾಗಬಾರದು. ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಾರದು. ಉದ್ಯೋಗವಕಾಶ ಸೇರಿದಂತೆ ಸ್ವತಂತ್ರವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವು ಪ್ರತಿಯೊಬ್ಬರಿಗೂ ಸಂವಿಧಾನ ಬದ್ಧವಾಗಿ ಬಂದಿದೆ. ಜಮೀನಿಗೆ ಹದ್ದು ಬಸ್ತು ಮಾಡಬೇಕು. ಖಾತಾ ನೀಡಬೇಕು ಎನ್ನುವಂತಹ ಸಾರ್ವಜನಿಕರ ಅನೇಕ ಮನವಿಗಳಿಗೆ ಸ್ಪಂದನೆ ನೀಡದೇ ಇದ್ದರೆ ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ವಸತಿ ನಿಲಯದ ಮಕ್ಕಳು ಸಮರ್ಪಕ ಗಾಳಿ, ಬೆಳಕು, ಶುಚಿಯಾದ ಆಹಾರ, ಶುದ್ಧ ನೀರು ಸಿಗದೇ ವಂಚಿತರಾದರೆ ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಯಾರೋ ಒಬ್ಬರು ಅನಿಷ್ಠ ಪದ್ಧತಿ ಪಾಲನೆ ಮಾಡುವುದರಿಂದಾಗಿ ಇನ್ನೊಬ್ಬರಿಗೆ ಅನ್ಯಾಯವಾದರೆ ಅದು ಸಹ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಅಧಿಕಾರಿಗಳು ಇಂತಹ ಸೂಕ್ಷ್ಮ ವಿಷಯಗಳನ್ನು ಅರಿಯಬೇಕು. ಯಾವುದೇ ವಿಷಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಯಾವುದೇ ಕಡೆಗೆ ಯಾವುದೇ ವಿಷಯದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗಿರುವುದು ಕಂಡು ಬಂದಲ್ಲಿ ಅದಕ್ಕೆ ಅಧಿಕಾರಿಗಳನ್ನೇ ನೇರ ಹೊಣೆಯಾಗಿಸಿ ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಕೆ ನೀಡಿದರು.
ನಿಮ್ಮ ನಿಮ್ಮ ಕಚೇರಿಗಳಿಗೆ ಯಾರೇ ಬರಲಿ, ಯಾವುದೇ ದೂರನ್ನು ತರಲಿ ಆ ಅಹವಾಲುದಾರರೊಂದಿಗೆ ಸಾವಧಾನದಿಂದ, ಸೌಜನ್ಯದಿಂದ ವರ್ತಿಸಬೇಕು. ಅವರೊಂದಿಗೆ ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಜಿಲ್ಲಾಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ: ರಾಯಚೂರು ಜಿಲ್ಲೆಯು ಸಹ ಇನ್ನು ಬದಲಾಗಬೇಕು; ಅಭಿವೃದ್ಧಿಯಾಗಬೇಕು. ಇಲ್ಲಿಗೆ ಬರುವ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಸಲಹೆ ಮಾಡಿದ ವಂಟಿಗೋಡಿ ಅವರು, ರಾಯಚೂರು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ದಕ್ಷ ಅಧಿಕಾರಿಗಳಾಗಿದ್ದು, ಜನಕಾಳಜಿ ಹೊಂದಿದ ಜಿಲ್ಲಾಧಿಕಾರಿಗಳನ್ನು ಪಡೆದ ರಾಯಚೂರು ಜಿಲ್ಲೆಯ ಜನರು ಭಾಗ್ಯಶಾಲಿಗಳು ಎಂದು ಜಿಲ್ಲಾಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಸಿಇಓ ಈಶ್ವರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಶು ಗಿರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಸಹಾಯಕ ಆಯುಕ್ತರಾದ ಬಸವಣೆಪ್ಪ ಕಲಶೆಟ್ಟಿ, ಡಾ.ಹಂಪಣ್ಣ ಸಜ್ಜನ್ ಸೇರಿದಂತೆ ವಿವಿಧ ತಾಲೂಕಿನ ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *