ರಾಯಚೂರು ಮಾರ್ಚ 26 (ಕ.ವಾ.): ರಾಯಚೂರು ಜಿಲ್ಲೆಯಲ್ಲಿ ವಿವಿಧ ಪತ್ರಿಕೆಗಳು ಪ್ರಕಟಿಸಿದ ಕುಂದುಕೊರತೆಗಳ ವಿಶೇಷ ವರದಿಗಳನ್ನು ದಾಖಲೆಯಾಗಿರಿಸಿಕೊಂಡು ಸಾರ್ವಜನಿಕ ಹಿತಾಸಕ್ತಿಯಿಂದ ಒಟ್ಟು 32 ಸುಮೊಟು ಕೇಸಗಳನ್ನು ದಾಖಲಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ.ಟಿ.ಶ್ಯಾಮ್ ಭಟ್ ಅವರು ತಿಳಿಸಿದರು.
ಮಾರ್ಚ 25ರಿಂದ ರಾಯಚೂರು ಪ್ರವಾಸದಲ್ಲಿರುವ ಅವರು, ಮಾರ್ಚ 26ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಮಾರ್ಚ 26ರಂದು ನಡೆದ ವಿಚಾರಣೆಯಲ್ಲಿ 32 ಸುಮೊಟು ಕೇಸಗಳು ಹಾಗೂ ಬೇರೆಡೆಯಿಂದ ಆಯೋಗದಲ್ಲಿ ದಾಖಲಾದ 27 ದೂರುಗಳು ಸೇರಿದಂತೆ ಒಟ್ಟು 59 ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಿದ್ದೇವೆ. ಕೆಲವು ಪ್ರಕರಣಗಳ ಬಗ್ಗೆ ಅಧಿಕಾರಿಗಳಿಂದ ವರದಿ ಕೇಳಿದ್ದೇವೆ ಎಂದು ತಿಳಿಸಿದರು.
ಮಾರ್ಚ 25ರಂದು ರಾಯಚೂರು ಸಿಟಿಯ ವಿವಿಧೆಡೆ ಭೇಟಿ ನೀಡಿದ್ದೇವೆ. ಆಸ್ಪತ್ರೆಗಳ ಸ್ಥಿತಿಯನ್ನು ಖುದ್ದು ಅವಲೋಕಿಸಿದ್ದೇವೆ. ಪೊಲೀಸ್ ಠಾಣೆಗಳಲ್ಲಿನ ಕ್ರೈಮ್ ಪ್ರಕರಣಗಳ ವಿವರ ಪಡೆದಿದ್ದೇವೆ. ಈ ಬಗ್ಗೆ ಸಭೆಯಲ್ಲಿ ಅಧಿಕಾರಿಗಳಿಂದ ವಿವರಣೆ ಕೇಳಿದ್ದೇವೆ ಎಂದು ತಿಳಿಸಿದರು.
ಮಾನವ ಹಕ್ಕುಗಳ ಆಯೋಗದಲ್ಲಿ 2022ರಿಂದ 8000 ಕೇಸಗಳಿದ್ದು, ಇವುಗಳ ವಿಚಾರಣೆ ನಡೆಸಿ ಬಹುತೇಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದೇವೆ. ಇನ್ನು 3600 ಪ್ರಕರಣಗಳು ಬಾಕಿ ಇವೆ. ಆಯೋಗದಲ್ಲಿ ಪ್ರತಿ ತಿಂಗಳು ಅಂದಾಜು 600ರಷ್ಟು ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಕೇಸಗಳು ದಾಖಲಾಗುತ್ತವೆ. ಒಂದು ದೂರನ್ನು ವಿಲೇ ಮಾಡಲು ಕನಿಷ್ಟ ಐದಾರು ತಿಂಗಳು ಸಮಯ ಹಿಡಿಯುತ್ತದೆ. ಆದಾಗ್ಯೂ ದೂರುಗಳ ವಿಲೇ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದೇವೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಆಯೋಗದ ನ್ಯಾಯಿಕ ಸದಸ್ಯರಾದ ಎಸ್.ಕೆ ವಂಟಿಗೋಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *