ಮಾನ್ವಿ : ಜಮಾಅತೇ ಇಸ್ಲಾಮೀ ಹಿಂದ್ ವತಿಯಿಂದ ಪವಿತ್ರ ಹಬ್ಬದ ಅಂಗವಾಗಿ ಈದ್ ಸೌಹಾರ್ದ ಕೂಟ”
ವನ್ನು ದಿನಾಂಕ ಮಾರ್ಚ್ 28 ಶನಿವಾರ ಸಂಜೆ 7:15 ಗಂಟೆಗೆ ಟಿ.ಎ.ಪಿ.ಸಿ.ಎಮ್.ಎಸ್ ಆವರಣದಲ್ಲಿ ಆಯೋಜಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಅಬ್ದುಲ್ ರೆಹಮಾನ್ ಹೇಳಿದರು. ರಮಝಾನ್ ತಿಂಗಳ ಪ್ರೀತಿ, ತ್ಯಾಗ, ಸಹನೆ ಮತ್ತು ದಾನಧರ್ಮದ ಮೌಲ್ಯಗಳನ್ನು ಸಮಾಜದ ಎಲ್ಲ ವರ್ಗಗಳೊಂದಿಗೆ ಹಂಚಿಕೊಳ್ಳುವ ಮೂಲಕ ಧರ್ಮ, ಜಾತಿ, ಭಾಷೆ, ಸಂಸ್ಕೃತಿ ಭೇದವಿಲ್ಲದೆ ಪರಸ್ಪರ ಸ್ನೇಹ, ಸೌಹಾರ್ದತೆ ಮತ್ತು ಸಹೋದರತ್ವವನ್ನು ಬಲಪಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಮಾಧ್ಯಮ ಕಾರ್ಯದರ್ಶಿ ಉಮರ್ ದೇವರಮನಿ ಮಾತನಾಡಿ, ಕಾರ್ಯಕ್ರಮದಲ್ಲಿ ಕಲ್ಮಠದ ವಿರುಪಾಕ್ಷ ಪಂಡಿತರಾಧ್ಯ ಮಹಾಸ್ವಾಮಿಗಳು ಹಾಗೂ ಸೇಂಟ್ ಮೇರಿ ಚರ್ಚ್‌ನ ಫಾದರ್ ವಿನ್ಸೆಂಟ್ ಸುರೇಶ್ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಣ್ಣ ನೀರಾವರಿ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಶಾಸಕ ಹಂಪಯ್ಯ ನಾಯಕ, ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಬಸನಗೌಡ ಬಾಗವಾಟ್, ಗಂಗಾಧರ ನಾಯಕ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಮುಖ್ಯ ಭಾಷಣಕಾರರಾಗಿ ಲಾಲ್ ಹುಸೇನ್ ಕಂದಗಲ್ ಭಗವಸಲಿದ್ದಾರೆ, ಮೌಲಾನಾ ಅನ್ವರ್ ಪಾಶಾ ಉಮ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗ್ರಾಮೀಣ ಪ್ರದೇಶದಿಂದ ಬರುವ ಜನರಿಗಾಗಿ ಊಟದ ವ್ಯವಸ್ಥೆ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಉಪಾಧ್ಯಕ್ಷ ಎಮ್.ಎ.ಎಚ್. ಮುಖೀಮ್ ಮಾತನಾಡಿ, ಸಾರ್ವಜನಿಕರು ತಮ್ಮ ಕುಟುಂಬದವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸೌಹಾರ್ದ ಕೂಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಅಬ್ದುಲ್ ಕರೀಮ್ ಖಾನ್, ಅಬ್ದುಲ್ ಗಫೂರ್, ಸೈಯದ್ ಅಕ್ಟರ್ ಪಾಷಾ ಹುಸೇನಿ, ಶೇಖ್ ಬಾಬಾ ಹುಸೇನ್, ಮೊಹಮ್ಮದ್ ಅಬ್ರಾರ್, ಮಿರ್ಜಾ ಬಾಬಾ ಬೇಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

