ರಾಯಚೂರು ಮಾರ್ಚ 26 (ಕ.ವಾ.): “ಚಿಕಿತ್ಸೆ ಫಲಿಸದೇ ಬಾಣಂತಿ, ಮಗು ಸಾವು..”, “ಕಲುಷಿತ ಆಹಾರ ಸೇವಿಸಿ ವಸತಿ ನಿಲಯದ ಮಕ್ಕಳು ಅಸ್ವಸ್ಥ”.., “ಅಮಾಯಕರ ಬಲಿ ಪಡೆದ ರಸ್ತೆ ಗುಂಡಿ”.. ಸೇರಿದಂತೆ ನಾನಾ ಕುಂದುಕೊರತೆಗಳ ಪತ್ರಿಕಾ ವರದಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ.ಟಿ.ಶ್ಯಾಮ್ ಭಟ್ ಹಾಗೂ ಆಯೋಗದ ನ್ಯಾಯಿಕ ಸದಸ್ಯರಾದ ಎಸ್.ಕೆ ವಂಟಿಗೋಡಿ ಅವರು ವರದಿ ಕೇಳಿದರು.
ಮಾರ್ಚ 26ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಕರಣಗಳ ವಿಲೇವಾರಿ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ದೂರುಗಳ ವಿಚಾರಣೆ ಸಭೆ ನಡೆಸಿದ ಅಧ್ಯಕ್ಷರು ಹಾಗು ಸದಸ್ಯರು, ಹಲವಾರು ದಿನಪತ್ರಿಕೆಗಳಲ್ಲಿ 2022ರಿಂದ ಇದುವರೆಗೆ ವಿವಿಧ ದಿನಪತ್ರಿಕೆಗಳಲ್ಲಿ ವರದಿಯಾದ ಕುಂದುಕೊರತೆಗಳನ್ನು ಉಲ್ಲೇಖಿಸಿ ಅಧಿಕಾರಿಗಳಿಂದ ವರದಿ ಕೇಳಿದರು.
ಅರಕೇರಾ ವಸತಿ ನಿಲಯದ ಅವ್ಯವಸ್ಥೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಸಂಬಂಧಪಟ್ಟ ಅಧಿಕಾರಿ ಮತ್ತು ವಾರ್ಡನಗೆ ನೋಟೀಸ್ ಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ದೇವದುರ್ಗ ತಾಲೂಕಿನ ಮನೆಯೊಂದರಲ್ಲಿ 80ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಯ ಅಕ್ಕಿ ಚೀಲಗಳು ಪತ್ರಿಕಾ ವರದಿಯ ಬಗ್ಗೆ ಕೇಳಿದರು. ಇಲಾಖೆಯಿಂದ ಎಚ್ಚರಿಕೆಯ ನೋಟಿಸ್ ನೀಡಿದ್ದೇವೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಲಿಂಗಸೂರ ಪುರಸಭೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ವರದಿಯ ಬಗ್ಗೆ ಕೇಳಿದರು. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ಥರಿಗೆ 5 ಲಕ್ಷ ಪರಿಹಾರ ನೀಡಿದ್ದೇವೆ ಎಂದು ಪುರಸಭೆ ಅಧಿಕಾರಿಗಳು ಪ್ರತಿಕ್ರಿಯಿಸಿದರು. ಆರ್‌ಟಿಪಿಎಸ್‌ನಲ್ಲಿ ಕರೆಂಟ್ ಶಾಖ್ ಕಾರ್ಮಿಕ ಸಾವು ಪ್ರಕರಣದಲ್ಲಿ ಪರಿಹಾರ ನೀಡಿದ್ದೇವೆ ಎಂದು ಆಯೋಗಕ್ಕೆ ಅಧಿಕಾರಿಗಳು ಮಾಹಿತಿ ನೀಡಿದರು.
ಕಲುಷಿತ ನೀರು ಸೇವಿಸಿ ಸಿಂದನೂರ ತಾಲೂಕಿನ ಗ್ರಾಮವೊಂದರಲ್ಲಿ 40 ಜನ ಅಸ್ವಸ್ಥ ಘಟನೆಯ ಬಗ್ಗೆ ಸದಸ್ಯರು ಕೇಳಿದರು. ಗ್ರಾಮದಲ್ಲಿ ಶುಚಿತ್ವ ಕಾರ್ಯ ನಡೆಸಿದ್ದೇವೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.
“ರಾಯಚೂರು ಜಿಲ್ಲೆಯಲ್ಲಿ ಬಾಲ ಗರ್ಭಿಣಿಯರು” ಎಂಬ ಪತ್ರಿಕಾ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ತಾಲೂಕುಗಳಲ್ಲಿ ಕಿಶೋರಿ ತರಬೇತಿ ಕೇಂದ್ರ ತೆರೆದು ಅಲ್ಲಿ ಜಾಗೃತಿ ಕಾರ್ಯಕ್ರಮ, ಚೈಲ್ಡ್ ಮ್ಯಾರೇಜ್ ತಡೆಗೆ ಜಾಗೃತಿ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪ್ರತಿಕ್ರಿಯಿಸಿದರು.
ಸ್ಮಶಾನಕ್ಕೆ ಸ್ಥಳ ಗುರುತಿಸಲು ಸೂಚನೆ: ಸಿಂಧನೂರ ತಾಲೂಕಿನ ಗ್ರಾಮವೊಂದರಲ್ಲಿ ಸ್ಮಶಾನ ಇಲ್ಲ ಎಂಬ ಪತ್ರಿಕಾ ವರದಿ ಉಲ್ಲೇಖಿಸಿದ ಆಯೋಗದ ಸದಸ್ಯರು, ಪ್ರತಿ ಗ್ರಾಮದಲ್ಲಿ ಸ್ಮಶಾನಕ್ಕೆ ಸ್ಥಳ ಗುರುತಿಸಿ ಕ್ರಮವಹಿಸಬೇಕು ಎಂದು ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿದರು.
ಸುಮೊಟೊ ಕೇಸ್ ದಾಖಲು: ಜಿಲ್ಲೆಯಲ್ಲಿ ನಾಲ್ವರು ಬಾಣಂತಿಯರ ಸಾವಿಗೀಡಾದ ಬಗೆಗಿನ ಪತ್ರಿಕಾ ವರದಿ ಆಧರಿಸಿ ಸುಮೊಟೊ ಕೇಸ್ ದಾಖಲಿಸಿದ ಬಗ್ಗೆ ತಿಳಿಸಿದ ಅಧ್ಯಕ್ಷರು, ಆರೋಗ್ಯ ಇಲಾಖೆಯಿಂದ ವಿವರಣೆ ಕೇಳಿದರು. ದೇವದುರ್ಗ ತಾಲೂಕಿನಿಂದ ವರದಿಯಾದ ಬಾಣಂತಿ ಮತ್ತು ಶಿಶು ಸಾವಿನ ಬಗ್ಗೆ ಕೇಳಿದರು. ಈ ಬಗ್ಗೆ ನಿರ್ಲಕ್ಷ್ಯ ಆಗಿಲ್ಲ ಎಂದು ಆರೋಗ್ಯ ಅಧಿಕಾರಿಗಳು ಪ್ರತಿಕ್ರಿಯಿಸಿದರು.
ಶಾಲಾ ಮುಖ್ಯ ಶಿಕ್ಷಕ ಅಮಾನತು: ಸಿಂಧನೂರು ತಾಲೂಕಿನ ಕುರಕುಂದ ಶಾಲೆಯಲ್ಲಿ ವಿದ್ಯುತ್ ಹರಿದು ಬಾಲಕಿ ಸಾವು ದುರ್ಘಟನೆ ಸಭೆಯಲ್ಲಿ ಚರ್ಚೆಗೆ ಬಂದಿತು. ಈ ಸಂಬಂಧ ಶಾಲಾ ಮುಖ್ಯ ಶಿಕ್ಷಕರ ಮೇಲೆ ಎಫ್ ಐಆರ್ ದಾಖಲಾಗಿ, ಅಮಾನತು ಮಾಡಲಾಗಿದೆ. ಜೆಸ್ಕಾಂ ಲೋಪವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ಗ್ರಾಮ ಸೇವಕ ಅಮಾನತು: ಸುಳ್ಳು ದಾಖಲೆ ಸೃಷ್ಟಿಸಿ ಲೋಪ ಎಸಗಿದ ಸಿರವಾರ ಹೋಬಳಿಯ ಗ್ರಾಮ ಸೇವಕ ಸಿದ್ದಪ್ಪ ಎಂಬುವರನ್ನು ಅಮಾನತು ಮಾಡಲಾಗಿದೆ ಎಂದು ಆಯೋಗಕ್ಕೆ ಅಧಿಕಾರಿಗಳು ತಿಳಿಸಿದರು.
ವೈದ್ಯರ ಮೇಲೆ ಕ್ರಮಕ್ಕೆ ಸೂಚನೆ: ದೇವದುರ್ಗ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದೇ ಬಾಣಂತಿ ಮತ್ತು ಮಗು ಸಾವಿನ ಬಗ್ಗೆ ವರದಿ ಕೇಳಿದ ಅಧ್ಯಕ್ಷರು, ವೈದ್ಯರ ಲೋಪದ ಬಗ್ಗೆಯೂ ಪರಿಶೀಲಿಸಬೇಕು ಎಂದರು. ಇಬ್ಬರು ನರ್ಸಗಳಿಗೆ ನೊಟೀಸ್ ನೀಡಿದ್ದೇವೆ ಎಂದು ಡಿಎಚ್‌ಓ ತಿಳಿಸಿದರು.
ಎಕರೆ ಜಮೀನು ಖರೀದಿ: ಮಸ್ಕಿ ನಗರದ ಮನೆ ಅಂಗಳದಲ್ಲಿ ಶವಸಂಸ್ಕಾರ ಸುದ್ದಿಗೆ ಸದಸ್ಯರು ವರದಿ ಕೇಳಿದರು. ಸ್ಥಳಕ್ಕೆ ಭೇಟಿ ಮಾಡಿದ್ದೇವೆ. ಎಕರೆ ಜಾಗ ಖರೀದಿಸಿ ಪರಿಹಾರ ಕಲ್ಪಿಸಿದ್ದೇವೆ ಎಂದು ಮಸ್ಕಿ ತಹಸೀಲ್ದಾರ ತಿಳಿಸಿದರು.
ಹಟ್ಟಿಗೋಲ್ಡ್ ಮೈನ್ ಆಸ್ಪತ್ರೆ ದುಸ್ಥಿತಿ: ವಿದ್ಯುತ್ ವ್ಯತ್ಯಯ ವೇಳೆಯಲ್ಲಿ ಮೊಬೈಲ್ ಟಾರ್ಚ ಬೆಳಕಿನಲ್ಲಿ ಹಟ್ಟಿಗೋಲ್ಡ್ ಮೈನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಮಾಡಲಾಗಿದೆ ಎನ್ನುವ ಪತ್ರಿಕಾ ವರದಿಗೆ ಅಧ್ಯಕ್ಷರು ವಿವರಣೆ ಕೇಳಿದರು. ಘಟನೆಯ ಬಳಿಕ ಸಮರ್ಪಕ ವಿದ್ಯುತ್ ಪೂರೈಕೆಗೆ ಆಸ್ಪತ್ರೆಯಲ್ಲಿ ಏರ್ಪಾಡು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸಕಾಲಕ್ಕೆ ವರದಿ ಸಲ್ಲಿಸಲು ನಿರ್ದೇಶನ: ರಾಯಚೂರ ಜಿಲ್ಲೆಯಲ್ಲಿ 59 ಪ್ರಕರಣಗಳ ವಿಚಾರಣೆ ಮಾಡಲಾಗಿದೆ ಎಂದು ತಿಳಿಸಿದ ಅಧ್ಯಕ್ಷರು, ಸಂಬಂಧಿಸಿದ ಇಲಾಖೆಗಳು ಸಕಾಲಕ್ಕೆ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Leave a Reply

Your email address will not be published. Required fields are marked *