ಡಾ. ಸಮೀಕ್ಷಾ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿ ಹಾಗೂ ಮೃಗಾಲಯದ ಲೋಪದೋಷಗಳ ವಿರುದ್ಧ ಮೌನ ಪ್ರತಿಭಟನೆ ವ್ಯಕ್ತಪಡಿಸಲು, ಮಸ್ಕಿ ಪಶುಚಿಕಿತ್ಸಾಲಯದ ಎಲ್ಲಾ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
ವನ್ಯಜೀವಿಗಳ ಲೋಕದಲ್ಲಿ ಪ್ರತಿಯೊಂದು ಜೀವವೂ ಅಮೂಲ್ಯ. ಆದರೆ, ಆ ಜೀವಗಳನ್ನು ಉಳಿಸುವ ಹಾದಿಯಲ್ಲಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಡಾ. ಸಮೀಕ್ಷಾ ರೆಡ್ಡಿ ಅವರ ಬಲಿದಾನ ಇಂದು ಮೃಗಾಲಯದ ನಿರ್ವಹಣಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ತ್ಯಾವರೆಕೊಪ್ಪ ಮೃಗಾಲಯದಲ್ಲಿ ಯುಗಾದಿಯ ಸಂಭ್ರಮದ ನಡುವೆಯೇ ನಡೆದ ಈ ದುರಂತ ಇಡೀ ರಾಜ್ಯವನ್ನೇ ಕಂಗೆಡಿಸಿದೆ.
ವಿದ್ಯಾರ್ಥಿ ದೆಸೆಯಿಂದಲೇ ಅತ್ಯಂತ ಕ್ರಿಯಾಶೀಲರಾಗಿದ್ದ ಸಮೀಕ್ಷಾ ರೆಡ್ಡಿ ಅವರಿಗೆ ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ. ವನ್ಯಜೀವಿಗಳ ಬಗ್ಗೆ ಅವರು ಹೊಂದಿದ್ದ ಕಾಳಜಿ ಕೇವಲ ವೃತ್ತಿಯಾಗಿರದೆ, ಅದೊಂದು ತಪಸ್ಸಾಗಿತ್ತು. ನೀರಾನೆಯ ಮೊದಲ ಎರಡು ಮರಿಗಳು ವಿವಿಧ ಕಾರಣಗಳಿಂದ ಸಾವನ್ನಪ್ಪಿದಾಗ, ಮೂರನೇ ಮರಿಯನ್ನಾದರೂ ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕು ಎಂಬ ತುಡಿತ ಅವರಲ್ಲಿತ್ತು. ಮತ್ತು ಪ್ರಾಣಿಗಳ ಮೇಲಿನ ಮಮಕಾರವೇ ಅವರನ್ನು ಆ ಮಧ್ಯರಾತ್ರಿ ನೀರಾನೆಯ ಎದುರು ನಿಲ್ಲುವಂತೆ ಮಾಡಲಾಯಿತು.
ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕರಾದ ಡಾ. ರಾಚಪ್ಪ, ಹಿರಿಯ ಪಶು ವೈದ್ಯಾಧಿಕಾರಿಗಳಾದ ಡಾ. ವಿಶ್ವನಾಥ್, ಪಶು ವೈದ್ಯಾಧಿಕಾರಿಗಳಾದ ಡಾ. ಅಭಿಷೇಕ್, ಮೈರಾಡ BFIL-IBL ಪಶು ವೈದ್ಯಾಧಿಕಾರಿಗಳಾದ ಡಾ. ಸಂದೀಪ್, ಜಾನುವಾರು ಅಭಿವೃದ್ಧಿ ಅಧಿಕಾರಿಗಳಾದ ಜಯರಾಜ್, ಮೈರಾಡ BFIL-IBL ಸಂಸ್ಥೆಯ ಜಿಲ್ಲಾ ಸಂಯೋಜಕರಾದ ದುರುಗಪ್ಪ ಮತ್ತು ಪ್ಯಾರವೇಟ್ ರಾದ ಬಸವರಾಜ್ ಭಾಗವಹಿಸಿದ್ದರು.
ಅಲ್ಲದೆ ಮಸ್ಕಿ ತಾಲೂಕಾ ಮೈತ್ರಿ ಕಾರ್ಯಕರ್ತರಾದ ಚನ್ನಾವೀರಯ್ಯ ಸ್ವಾಮಿ, ಪ್ರಭಾನಂದ ಶಾಸ್ತ್ರಿ, ವಿದ್ಯಾನಂದ ಎಸ್., ಬಸವರಾಜ್, ಮೌನೇಶ್ ಹಾಗೂ ಶಿವರಾಜ್ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದು, ಮೃತ ವೈದ್ಯೆಯ ಸೇವೆಯನ್ನು ಸ್ಮರಿಸಿದರು.
ಎಚ್ಚರಿಕೆಯ ಗಂಟೆ
ಸಮೀಕ್ಷಾ ಅವರು ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ದೊಡ್ಡ ಕನಸು ಕಂಡಿದ್ದ ಯುವ ಪ್ರತಿಭೆ. ನೀರಾನೆಯ ಮರಿಯನ್ನು ಉಳಿಸುವ ಅವರ ಪ್ರಾಮಾಣಿಕ ಪ್ರಯತ್ನ ಶ್ಲಾಘನೀಯವಾದರೂ, ಅದಕ್ಕೆ ಅವರು ತೆತ್ತ ಬೆಲೆ ತುಂಬಲಾರದ್ದು. ವನ್ಯಜೀವಿ ಮೃಗಾಲಯಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪ್ರಾಣಿಗಳ ವರ್ತನೆಯ ಬಗ್ಗೆ ಸೂಕ್ಷ್ಮ ಜ್ಞಾನ ಮತ್ತು ಕಟ್ಟುನಿಟ್ಟಾದ ಸುರಕ್ಷತಾ ನಿಯಮಗಳ ಪಾಲನೆ ಅತ್ಯಗತ್ಯ. ಸಮೀಕ್ಷಾ ರೆಡ್ಡಿ ಅವರ ಸಾವು ವ್ಯವಸ್ಥೆಗೆ ಒಂದು ಎಚ್ಚರಿಕೆಯ ಗಂಟೆಯಾಗಲಿ.
ಡಾ. ಸಮೀಕ್ಷಾ ರೆಡ್ಡಿ ಅವರ ವನ್ಯಜೀವಿ ಪ್ರೇಮ ಮತ್ತು ಧೈರ್ಯ ಸದಾ ಸ್ಮರಣೀಯ.

