ಯಾದಗಿರಿ : “ವಿದ್ಯಾರ್ಥಿಗಳು ಕೇವಲ ಸರ್ಕಾರಿ ನೌಕರಿ ಪಡೆಯುವ ಗುರಿ ಹೊಂದದೆ, ಸ್ವಯಂ ಉದ್ಯೋಗ ಸ್ಥಾಪಿಸಿ ಇತರರಿಗೆ ಉದ್ಯೋಗ ನೀಡುವಂತಹ ವೃತ್ತಿಪರ ಕೋರ್ಸ್‌ಗಳನ್ನು ಕಲಿಯಬೇಕು” ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಲವೀಶ್ ಒರಡಿಯಾ ಅವರು ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಇಲಾಖೆ, ಡಯಟ್ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ ‘ವೃತ್ತಿ ಶಿಕ್ಷಣ ಪ್ರದರ್ಶನ ಮತ್ತು ಕೆರಿಯರ್ ಮೇಳ’ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಸರ್ಕಾರಿ ನೌಕರಿಗಳ ಕಡೆಗೆ ವಿದ್ಯಾರ್ಥಿಗಳ ಒಲವು ಹೆಚ್ಚಿದೆ. ಆದರೆ, ವಿವಿಧ ಕೌಶಲಾಭಿವೃದ್ಧಿ ಕೋರ್ಸ್‌ಗಳನ್ನು ಪೂರೈಸುವ ಮೂಲಕ ಸ್ವಂತ ಉದ್ಯಮ ಆರಂಭಿಸಲು ದೊಡ್ಡ ಅವಕಾಶಗಳಿವೆ ಎಂದು ಸಿಇಒ ಕಿವಿಮಾತು ಹೇಳಿದರು.ಡಿಡಿಪಿಐ ಚನ್ನಬಸಪ್ಪ ಮುಧೋಳ ಮಾತನಾಡಿ, ಪ್ರೌಢಶಾಲೆ ಮತ್ತು ಪಿಯು ಹಂತದ ಮಕ್ಕಳಿಗೆ ಮುಂದಿನ ಶಿಕ್ಷಣ, ವಿದ್ಯಾರ್ಥಿವೇತನ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಸಮಗ್ರ ಮಾರ್ಗದರ್ಶನ ನೀಡಲು ಈ ಮೇಳ ಹಮ್ಮಿಕೊಳ್ಳಲಾಗಿದೆ ಎಂದರು.ಮಕ್ಕಳು ತಮ್ಮ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಬೇಕು. ಪೋಷಕರು ಮಕ್ಕಳ ಮೇಲೆ ಒತ್ತಡ ಹೇರದೆ ಅವರ ಆಸಕ್ತಿಯ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.ಡಯಟ್ ಉಪ ನಿರ್ದೇಶಕ ವೃಷಭೇಂದ್ರಯ್ಯ ಜಿ.ಎಂ. ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ವೃತ್ತಿ ಜೀವನ ವಿಭಾಗ ಸ್ಥಾಪಿಸಲಾಗುತ್ತಿದ್ದು, ಇಂತಹ ಮೇಳಗಳನ್ನು ಪ್ರತಿ ತಾಲೂಕುಗಳಲ್ಲಿ ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಐಟಿಐ ಪ್ರಾಚಾರ್ಯ ಅನಿಲಕುಮಾರ ಜಿಂದೆ ಮತ್ತು ಎಸ್‌ಆರ್‌ಟಿಟಿ ಕಂಪನಿಯ ಮಹೇಶ ಅವರು ಕೆರಿಯರ್ ಮಾರ್ಗದರ್ಶನ ನೀಡಿದರು. ಸ್ಕೌಟ್ ಮತ್ತು ಗೈಡ್ಸ್‌ನ 15 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಮೇಳದಲ್ಲಿ 12 ವೃತ್ತಿಪರ ಕಾಲೇಜುಗಳು ಭಾಗವಹಿಸಿದ್ದವು.
ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಡಿಡಿಪಿಯು ಪಂಡಿತರಾವ, ಬಿಇಒ ಈರಪ್ಪ ಕನ್ನಳ್ಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಅನ್ನಪೂರ್ಣ ಅವರು ಕಾರ್ಯಕ್ರಮ ನಿರೂಪಿಸಿ, ಶರಣಗೌಡ ಪಾಟೀಲ ಅವರು ವಂದಿಸಿದರು.
ಅಂಕಗಳ ಜೊತೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಯಾವುದಾದರು ಒಂದು ವಿಶೇಷ ಕೌಶಲವನ್ನು (Skill) ಕಲಿತುಕೊಳ್ಳಿ.
ಸ್ವಯಂ ಉದ್ಯೋಗ ಆರಂಭಿಸಲು ಸರಕಾರ ನೀಡುವ ‘ಮುದ್ರಾ’ ಯೋಜನೆ ಅಥವಾ ಕೌಶಲಾಭಿವೃದ್ಧಿ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

Leave a Reply

Your email address will not be published. Required fields are marked *