ಯಾದಗಿರಿ: “ಬಡತನ ಮತ್ತು ಅರಿವಿನ ಕೊರತೆಯಿಂದ ಆರೋಗ್ಯ ಸೇವೆಗಳಿಂದ ವಂಚಿತರಾಗುವ ಗ್ರಾಮೀಣ ಜನರಿಗೆ ಆರ್ಥಿಕ ಹೊರೆಯಿಲ್ಲದೆ ಗುಣಮಟ್ಟದ ಚಿಕಿತ್ಸೆ ಒದಗಿಸುವಲ್ಲಿ ಉಚಿತ ಆರೋಗ್ಯ ಶಿಬಿರಗಳು ಮಹತ್ತರ ಪಾತ್ರ ವಹಿಸುತ್ತವೆ” ಎಂದು ಗುರುಮಠಕಲ್ ಖಾಸಾಮಠದ ಶಾಂತವೀರ ಗುರು ಮುರಘರಾಜೇಂದ್ರ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ಸಮೀಪದ ಬದ್ದೇಪಲ್ಲಿ ಗ್ರಾಮದಲ್ಲಿ ಹೊಂಗಿರಣ ಚಾರಿಟಬಲ್ ಟ್ರಸ್ಟ್, ವೇದಾ ಚಾರಿಟಬಲ್ ಟ್ರಸ್ಟ್ ಮತ್ತು ಲಯನ್ಸ್ ಕ್ಲಬ್ ಯಾದಗಿರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ವಿತರಣಾ ಶಿಬಿರದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ತಜ್ಞ ವೈದ್ಯರ ಸಮಾಲೋಚನೆ ಮತ್ತು ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ ಮಾಹಿತಿಯನ್ನು ಜನ ಸಾಮಾನ್ಯರಿಗೆ ತಲುಪಿಸುವುದು ಇಂದಿನ ಅಗತ್ಯವಾಗಿದೆ. ಹೊಂಗಿರಣ ಚಾರಿಟಬಲ್ ಟ್ರಸ್ಟ್ ಇತರ ಸಂಸ್ಥೆಗಳೊಂದಿಗೆ ಕೈಜೋಡಿಸಿ ಮಾಡುತ್ತಿರುವ ಈ ಜನಪರ ಕಾರ್ಯ ಶ್ಲಾಘನೀಯ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.ಶಿಬಿರದಲ್ಲಿ ಬದ್ದೇಪಲ್ಲಿ ಸೇರಿದಂತೆ ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಹಳ್ಳಿಗಳ ನೂರಾರು ಗ್ರಾಮಸ್ಥರು ಉತ್ಸಾಹದಿಂದ ಭಾಗವಹಿಸಿ ತಪಾಸಣೆ ಮಾಡಿಸಿಕೊಂಡರು.ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. ಅಲ್ಲದೆ, ತಪಾಸಣೆ ವೇಳೆ ಗಂಭೀರ ಸಮಸ್ಯೆ ಕಂಡುಬಂದ ರೋಗಿಗಳನ್ನು ಯಾದಗಿರಿಯ ವೇದಾ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಪಡಿಸಲು ಆಯ್ಕೆ ಮಾಡಲಾಯಿತು.
ಕೇವಲ ತಪಾಸಣೆಗೆ ಸೀಮಿತವಾಗದೆ, ಮುಂದಿನ ಶಸ್ತ್ರಚಿಕಿತ್ಸೆಗೂ ವ್ಯವಸ್ಥೆ ಮಾಡಿರುವುದು ಸಂಘಟಕರ ಸಾಮಾಜಿಕ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ ಎಂದು ಗಣ್ಯರು ಬಣ್ಣಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ವೇದಾ ಆಸ್ಪತ್ರೆಯ ನೇತ್ರ ತಜ್ಞರು, ಲಯನ್ಸ್ ಕ್ಲಬ್ ಸದಸ್ಯರು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಕಣ್ಣಿನ ರಕ್ಷಣೆ, ಮಧುಮೇಹದಿಂದ ಕಣ್ಣಿನ ಮೇಲಾಗುವ ಪರಿಣಾಮಗಳು ಮತ್ತು ಕ್ಯಾಟರಾಕ್ಟ್ (ಪೊರೆ) ಸಮಸ್ಯೆಯ ಬಗ್ಗೆ ವೈದ್ಯರು ಜನರಿಗೆ ಜಾಗೃತಿ ಮೂಡಿಸಿದರು.ಶಸ್ತ್ರಚಿಕಿತ್ಸೆಗೆ ಆಯ್ಕೆಯಾದ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಮತ್ತು ಮರಳಿ ಕರೆತರಲು ಉಚಿತ ವಾಹನ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆಯೂ ಚರ್ಚಿಸಲಾಯಿತು.ಮಾರುಕಟ್ಟೆಯಲ್ಲಿ ದುಬಾರಿಯಾಗಿರುವ ಕಣ್ಣಿನ ಚಿಕಿತ್ಸೆ ಮತ್ತು ಕನ್ನಡಕಗಳು ಮನೆ ಬಾಗಿಲಿಗೆ ಉಚಿತವಾಗಿ ದೊರೆತಿರುವುದಕ್ಕೆ ಬದ್ದೇಪಲ್ಲಿ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *