ರಾಯಚೂರು ಮಾರ್ಚ್ 23 (ಕರ್ನಾಟಕ ವಾರ್ತೆ): ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ನೊಂದವರಿಗೆ ಸೂಕ್ತ ನೆರವನ್ನು ಒದಗಿಸುವ ನಿಟ್ಟಿನಲ್ಲಿ 1993ರ ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮದ ಅಡಿಯಲ್ಲಿ ಸ್ಥಾಪಿತವಾಗಿರುವ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಮಾರ್ಚ್ 25 ಹಾಗೂ ಮಾರ್ಚ 26ರಂದು ರಾಯಚೂರು ಜಿಲ್ಲೆಯಲ್ಲಿ ಸಿಟ್ಟಿಂಗ್ಸ್ ನಡೆಸಲು ಉದ್ದೇಶಿಸಿದೆ. ರಾಯಚೂರು ಜಿಲ್ಲೆಗೆ ಸಂಬಂಧಿಸಿದಂತೆ ಆಯೋಗದಲ್ಲಿ ನೋಂದಣಿಯಾಗಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಿ ವಿಲೇಮಾಡಿ ಕ್ರಮ ಜರುಗಿಸಲು ಉದ್ದೇಶಿಸಲಾಗಿದೆ. ದೂರುದಾರರು ಹಾಗೂ ಪ್ರತಿವಾದಿ ಪ್ರಾಧಿಕಾರಗಳು ಈ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಲಾಗಿದೆ.
ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆಯಲ್ಲಿನ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿಗದಿತ ದಿನಾಂಕದಂದು ಸಾರ್ವಜನಿಕರಿಂದ ದೂರುಗಳು ಅಥವಾ ಅಹವಾಲುಗಳನ್ನು ಸಹ ಸ್ವೀಕರಿಸಲು ಉದ್ದೇಶಿಸಲಾಗಿದ್ದು, ಸಾರ್ವಜನಿಕರು ನಿಗದಿತ ದಿನಾಂಕದಂದು ಆಯೋಗದ ಮಾನ್ಯ ಅಧ್ಯಕ್ಷರು (ಹಂಗಾಮಿ) ಹಾಗೂ ಮಾನ್ಯ ಸದಸ್ಯರನ್ನು ಸಂಪರ್ಕಿಸಿ ದೂರುಗಳನ್ನು ಸಲ್ಲಿಸಬಹುದು. ದಿನಾಂಕ 25-03-2026 ಮತ್ತು 26-03-2026ರಂದು ರಾಯಚೂರು ಜಿಲ್ಲೆಯಲ್ಲಿ ಸಿಟ್ಟಿಂಗ್ಸ್ ನಡೆಸುವುದಾಗಿ ಆಯೋಗವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿ ಎ ದಿನೇಶ್ ಸಂಪತ್‌ರಾಜ್ ಅವರು ತಿಳಿಸಿದ್ದಾರೆ.

