“ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಪಂಡಿತ ಪಂಚಾಕ್ಷರಿ ಗವಾಯಿಗಳು ನೀಡಿರುವ ಕೊಡುಗೆ ಅಪಾರ. ಅವರು ಕೇವಲ ಸಂಗೀತಗಾರರಾಗಿರದೆ, ತಮ್ಮ ಇಡೀ ಬದುಕನ್ನು ಅಂಧ ಮಕ್ಕಳ ಏಳಿಗೆಗಾಗಿ ಮುಡಿಪಾಗಿಟ್ಟ ಮಹಾನ್ ಚೇತನ,” ಎಂದು ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ ವೆಂಕಟೇಶ ಕುಮಾರ್ ಅವರು ಬಣ್ಣಿಸಿದರು.
ನಗರದ ಆಲೂರು ವೆಂಕಟರಾವ್ ಭವನದಲ್ಲಿ ಭಾನುವಾರ, ಮಾನವಿ ವಿದ್ಯಾಧರೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಪಂ. ಪಂಚಾಕ್ಷರಿ ಗವಾಯಿಗಳ 135ನೇ ಜಯಂತ್ಯುತ್ಸವ, ‘ಪಂ. ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಯುವ’ ಪ್ರಶಸ್ತಿ ಪ್ರದಾನ ಹಾಗೂ ‘ಪರಂಪರಾ’ ಸಂಗೀತ ಉತ್ಸವದಲ್ಲಿ ಅವರು ಮಾತನಾಡುತ್ತಿದ್ದರು.
ಸಂಗೀತ ಎಂಬುದು ಕೇವಲ ಕಲೆಯಲ್ಲ, ಅದೊಂದು ಶಿಸ್ತುಬದ್ಧ ಜೀವನ ವಿಧಾನ. ಕಠಿಣ ಪರಿಶ್ರಮವಿಲ್ಲದೆ ಸಂಗೀತ ಸಿದ್ಧಿಸಲು ಸಾಧ್ಯವಿಲ್ಲ ಎಂದು ಪಂ. ವೆಂಕಟೇಶ ಕುಮಾರ್ ಕಿವಿಮಾತು ಹೇಳಿದರು.ಎಷ್ಟೇ ದೊಡ್ಡ ಮಟ್ಟದ ಸಾಧನೆ ಮಾಡಿದರೂ, ನಮಗೆ ದಾರಿ ತೋರಿಸಿದ ಗುರುಗಳನ್ನು ಯಾವತ್ತೂ ಮರೆಯಬಾರದು ಎಂದು ಅವರು ನೆನಪಿಸಿದರು.ಇಂದಿನ ಯುವಕರು ಹಿಂದೂಸ್ತಾನಿ ಸಂಗೀತದ ಕಡೆಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಮತ್ತು ಶ್ರದ್ಧೆಯಿಂದ ಪರಂಪರೆಯನ್ನು ಉಳಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಹರ್ಷ ವ್ಯಕ್ತಪಡಿಸಿದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಮಾತನಾಡಿ, “ಸಂಗೀತ ಸಾಧನೆಯು ಒಂದು ಕಠಿಣ ತಪಸ್ಸು. ಜೀವನ ಪರ್ಯಂತ ಸಾಧನೆ ಮಾಡಿದರೆ ಮಾತ್ರ ಇದನ್ನು ಒಲಿಸಿಕೊಳ್ಳಲು ಸಾಧ್ಯ. ಪಂಚಾಕ್ಷರಿ ಗವಾಯಿಗಳು ಸಂಗೀತದ ಮೂಲಕ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗಾಯಕರಾದ ವಿರೂಪಾಕ್ಷಯ್ಯ ವಂದಲಿ, ಶಾಂತಾರಾಮ ಹೆಗಡೆ, ಉದಯ ದೇಸಾಯಿ, ಬಸವರಾಜ ವಂದಲಿ, ರಾಘವ ಕಮ್ಮಾರ, ವಿಜಯಕುಮಾರ ಸುತ್ತಾರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *