ವಿಜಯಪುರ: ಯುಗಾದಿ ಹಬ್ಬದ ಅಂಗವಾಗಿ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ವತಿಯಿಂದ 8ನೇ ವಾರ್ಡಿನ ಒಕ್ಕಲಿಗರ ಬೀದಿ ಹಾಗೂ ರಾಮಮಂದಿರ ಬೀದಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಗೋಲಿ ಸ್ಪರ್ಧೆಯು ಸಂಭ್ರಮದಿಂದ ಜರುಗಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಅವರು, “ರಂಗೋಲಿಯು ನಮ್ಮ ಶ್ರೀಮಂತ ಸಂಸ್ಕೃತಿಯ ಸಂಕೇತವಾಗಿದೆ. ಒಂದು ಮನೆಯ ರಂಗೋಲಿಯನ್ನು ನೋಡಿ ಆ ಮನೆಯ ಸಂಪ್ರದಾಯ ಮತ್ತು ಹಿನ್ನೆಲೆಯನ್ನು ತಿಳಿಯಬಹುದು. ರಂಗೋಲಿ ಬಿಡಿಸುವುದು ಕೇವಲ ಕಲೆಯಲ್ಲ, ಅದು ಮನಸ್ಸಿಗೆ ಸಂತೋಷ ನೀಡುವ ಜೊತೆಗೆ ಆರೋಗ್ಯವನ್ನೂ ವೃದ್ಧಿಸುತ್ತದೆ,” ಎಂದು ತಿಳಿಸಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಆರ್.ಕೆ. ನಂಜೇಗೌಡ ಮಾತನಾಡಿ, “ನಮ್ಮ ಹಿರಿಯರು ಹಾಕಿಕೊಟ್ಟ ಸಾಂಸ್ಕೃತಿಕ ಚಟುವಟಿಕೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಇಂತಹ ಸ್ಪರ್ಧೆಗಳ ಆಯೋಜನೆ ಅತ್ಯಗತ್ಯ,” ಎಂದು ಅಭಿಪ್ರಾಯಪಟ್ಟರು.
ಸ್ಪರ್ಧೆಯಲ್ಲಿ ಅತ್ಯುತ್ತಮ ರಂಗೋಲಿ ಬಿಡಿಸಿದ ಸಾವಿತಮ್ಮ (ಪ್ರಥಮ), ಮಂಗಳಮ್ಮ (ದ್ವಿತೀಯ) ಹಾಗೂ ಲಕ್ಷ್ಮೀ (ತೃತೀಯ) ಬಹುಮಾನ ಪಡೆದರು. ಉಳಿದಂತೆ ಎಂಟು ಮಂದಿಗೆ ಸಮಾಧಾನಕರ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಎನ್. ಕನಕರಾಜು, ತಾಲ್ಲೂಕು ಕಸಾಪ ಉಪಾಧ್ಯಕ್ಷ ಜೆ.ಆರ್. ಮುನಿವೀರಣ್ಣ, ಜಿಲ್ಲಾ ಕೋಶಧ್ಯಕ್ಷ ಅಪ್ಪಯ್ಯಣ್ಣ, ಸಾಹಿತಿ ಶರಣಯ್ಯ ಹಿರೇಮಠ್, ಹಾಗೂ ಜೆಸಿಐ ಮಾಜಿ ಅಧ್ಯಕ್ಷ ಎನ್.ಸಿ. ಮುನಿವೆಂಕಟರಮಣ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *